ಒoದಲ್ಲ ಒಂದು ಹೋರಾಟದ ಮೂಲಕ ಗುರುತಿಸಿಕೊಂಡಿರುವ ಕುಮಟಾದ ಭಾಸ್ಕರ ಪಟಗಾರ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಇದೀಗ ಅವರು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಷ್ಟ್ರೀಯ ಕಾಂಗ್ರೆಸಿನ ವೀಕ್ಷಕಿ ರೋಶಾಲಿನ ತಿರ್ಕಿ ಅವರನ್ನು ಭಾಸ್ಕರ ಪಟಗಾರ ಅವರು ಭೇಟಿಯಾಗಿ ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
`ಕಳೆದ ಅನೇಕ ವರ್ಷಗಳಿಂದ ತಾನೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಬೂತ್ ಮಟ್ಟದಲ್ಲಿ ಯುವಕರನ್ನು ಸಂಘಟಿಸಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದಲ್ಲಿಯೂ ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದು, ಈವರೆಗೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಎಲ್ಲಾ ಸಮುದಾಯಗಳ ಸಕ್ರಿಯ ಸಂಘಟನೆಗೆ ಒತ್ತು ನೀಡುವೆ’ ಎಂಬ ಭರವಸೆಯನ್ನು ನೀಡಿದ್ದಾರೆ. ಅದರೊಂದಿಗೆ `2020ರಲ್ಲಿ ಆಗಿನ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪಕ್ಷ ಸೇರಿದ್ದು, 2023ರಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದು, ಅದಾದ ನಂತರ ಭಟ್ಕಳ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕನಾಗಿ ಒಂದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ. 2023ರಲ್ಲಿ ಜಿಲ್ಲಾ ಕೆಪಿಸಿಸಿ ಸಂಯೋಜಕನಾಗಿ ಇಂದಿನವರೆಗೂ ಪಕ್ಷದ ವಿಚಾರವಾಗಿ ಪಕ್ಷದ ಪರವಾಗಿ ದುಡಿಯುತ್ತಿದ್ದೇನೆ’ ಎಂಬ ವಿಷಯವನ್ನು ಅವರು ಗಮನಕ್ಕೆ ತಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ಹಿನ್ನಲೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಶ್ರಮಿಸಿದ ವಿಚಾರ ಹಾಗೂ ವಿವಿಧ ಸಾರ್ವಜನಿಕ ಸಂಘಟನೆಗಳಲ್ಲಿನ ಅನುಭವಗಳ ಬಗ್ಗೆಯೂ ಅವರು ವಿವರಿಸಿದ್ದಾರೆ. `ಈ ತನ್ನ ಈ ಎಲ್ಲಾ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ. ಭಾಸ್ಕರ ಪಟಗಾರ ಅವರ ಮಾತು ಆಲಿಸಿದ ರಾಷ್ಟ್ರೀಯ ಕಾಂಗ್ರೆಸಿನ ವೀಕ್ಷಕಿ ರೋಶಾಲಿನ ತಿರ್ಕಿ ಅವರು ಅವರ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.