ದೇವರಿಗೆ ದೀಪ ಹಚ್ಚುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿದ ಪರಿಣಾಮ ಕುಮಟಾದ ಮೋಹಿನಿ ವೆಂಗುರ್ಲೆಕರ್ ಅವರು ಸಾವನಪ್ಪಿದ್ದಾರೆ. ಗಾಯಗೊಂಡ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಿದರೂ ಪ್ರಯೋಜನವಾಗಿಲ್ಲ.
ಕುಮಟಾದ ಅಳ್ವೆಕುಡಿಯಲ್ಲಿ ಮೋಹಿನಿ ತಮ್ಮಣ್ಣ ವೆಂಗುರ್ಲೆಕರ್ ಅವರು ವಾಸವಾಗಿದ್ದರು. 70 ವರ್ಷದ ಅವರಿಗೆ ಕೂಲಿ ಕೆಲಸ ಮಾಡುವ ಮಗ ಚಂದ್ರಕಾAತ ವೆಂಗುರ್ಲೆಕರ್ ಅವರು ಆಸರೆಯಾಗಿದ್ದರು. ಮೋಹಿನಿ ಅವರಿಗೆ ದೇವರ ಮೇಲೆ ಅಪಾರ ಭಕ್ತಿಯಿದ್ದು, ನಿತ್ಯ ದೇವರಿಗೆ ದೀಪ ಹಚ್ಚುವುದನ್ನು ರೂಢಿಸಿಕೊಂಡಿದ್ದರು. ಸಂಜೆ ದೀಪ ಬೆಳಗಿದ ನಂತರ ಅವರು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದರು.
ಜೂನ್ 15ರ ರಾತ್ರಿಯೂ ಅವರು ಎಂದಿನoತೆ ದೇವರಿಗೆ ದೀಪ ಹಚ್ಚಿದ್ದರು. ಈ ವೇಳೆ ಅಲ್ಲಿದ್ದ ಅಗ್ನಿ ಅಜ್ಜಿಯ ಸೀರೆಗೆ ತಗುಲಿದ್ದು, ಕ್ಷಣಮಾತ್ರದಲ್ಲಿ ಅದು ಎರಡು ಕಾಲುಗಳಿಗೆ ಹರಡಿಕೊಂಡಿತು. ಅಗ್ನಿ ಅವಘಡದಿಂದ ಗಾಯಗೊಂಡ ಮೋಹಿನಿ ವೆಂಗುರ್ಲೇಕರ್ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ, ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಆದರೆ, ಆ ನೋವು ಸಹಿಸಲಾಗದೇ ಅವರು ಜುಲೈ 13ರ ರಾತ್ರಿ ಪ್ರಾಣ ಬಿಟ್ಟರು.