ಅನುದಾನಿತ ಶಾಲಾ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದವರು ಸಿಡಿದೆದ್ದಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾರವಾರದ ಹಿಂದೂ ಹೈಸ್ಕೂಲಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
ಒಟ್ಟು 20 ಮುಖ್ಯ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದಾರೆ. ಆ ಪತ್ರದ ಮೂಲಕ ನೇಮಕಾತಿ ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ಒತ್ತಾಯಿಸಿದ್ದಾರೆ. `2015ರ ನಂತರ ಖಾಲಿಯಾದ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಅಲ್ಲಿಯವರೆಗೆ ಸರ್ಕಾರವೇ ಅತಿಥಿ ಶಿಕ್ಷಕರನ್ನು ನೇಮಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. `ಹಳೆ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸಿಗುವ ಎಲ್ಲಾ ವೇತನ ಹಾಗೂ ಪಿಂಚಣಿ ಸೌಲಭ್ಯಗಳನ್ನು ಅನುದಾನಿತ ಶಿಕ್ಷಕರಿಗೂ ಒಂದೇ ಆದೇಶದ ಮೂಲಕ ವಿಸ್ತರಿಸಬೇಕು. 1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ವೇತನಾನುದಾನ ಮಂಜೂರು ಮಾಡಬೇಕು. ಉತ್ತಮ ಫಲಿತಾಂಶ ತಂದ ಶಾಲೆಗಳಿಗೆ ಗೌರವ ಸಂಭಾವನೆ ನೀಡಬೇಕ’ ಎಂದು ಆಗ್ರಹಿಸಿದ್ದಾರೆ.
`ವಿದ್ಯಾರ್ಥಿಗಳ ಸೌಲಭ್ಯಗಳ ತಾರತಮ್ಯವನ್ನು ತೊಡೆದುಹಾಕಲು ಆಗ್ರಹಿಸಿ, ಸರ್ಕಾರಿ ಶಾಲೆಗಳಂತೆ ಅನುದಾನಿತ ಶಾಲೆಗಳಿಗೂ ಉಚಿತ ಸೌಲಭ್ಯಗಳು, ಸ್ಯಾಟ್ಸ್ ಶುಲ್ಕ ಹಾಗೂ ಶಾಲಾ ನಿರ್ವಹಣಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಹೇಳಿದ್ದಾರೆ. `ಶೈಕ್ಷಣಿಕ ಸುಧಾರಣೆಯ ಭಾಗವಾಗಿ ಹೊಸ ಕೆಪಿಎಸ್ ಶಾಲೆಗಳನ್ನು ತೆರೆಯುವಾಗ ಕನಿಷ್ಠ 3 ಕಿಮೀ ವ್ಯಾಪ್ತಿಯಲ್ಲಿ ಅನುದಾನಿತ ಶಾಲೆಗಳಿಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಶಿಕ್ಷಕರನ್ನು ಅಕ್ಷರದಾಸೋಹ, ಕ್ಷೀರಭಾಗ್ಯದಂತಹ ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಬೃಹತ್ ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭಾಕರ ಬಂಟ, ಕಾರ್ಯದರ್ಶಿ ಎಲ್.ಎಂ. ಹೆಗಡೆ, ಉಪಾಧ್ಯಕ್ಷರಾದ ಮಾದೇವ ರಾಣೆ, ಪಾಂಡುರAಗ ವಾಗ್ರೇಕರ, ಸಹ ಕಾರ್ಯದರ್ಶಿ ಸುನೀಲ್ ವಾಸ್, ಪ್ರಶಾಂತ ನಾಯ್ಕ ಹಾಗೂ ಪ್ರಮುಖರಾದ ಪಿ.ಟಿ. ಚೌಹಾಣ್, ಜೈ ರಂಗನಾಥ್, ಗಣೇಶ ಬಿಷ್ಠಣ್ಣನರ್, ಉಮೇಶ ದೊಡ್ಮನಿ, ಅಂಕೋಲಾದ ಗಣಪತಿ ನಾಯಕ, ವಿ. ಆರ್. ತಾಂಡೇಲ್, ಹೊನ್ನಾವರದ ಸತೀಶ್ ನಾಯ್ಕ, ಭಟ್ಕಳದ ಕೆ ಬಿ. ಮಡಿವಾಳ ಇತರರು ಇದ್ದರು.