ಅಂಕೋಲಾದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ವಿದೇಶಿ ಧ್ವಜ ಹಾರಾಡಿದೆ. ಪ್ಯಾಲೆಸ್ಟೈನ್ ಧ್ವಜ ಹಾರುವುದನ್ನು ನೋಡಿದ ಪೊಲೀಸರು ತಕ್ಷಣ ಅಲ್ಲಿಗೆ ದೌಡಾಯಿಸಿ, ಆ ಧ್ವಜವನ್ನು ವಶಕ್ಕೆಪಡೆದಿದ್ದಾರೆ.
ಅಂಕೋಲಾದ ಬೊಬ್ರುವಾಡದಿಂದ ಪಟ್ಟಣದಲ್ಲಿ ಬುಧವಾರ ಈದ್ ಮಿಲಾದ್ ಮೆರವಣಿಗೆ ನಡೆದಿದೆ. ಬಂಡಿಬಜಾರ ಬಳಿ ಮೆರವಣಿಗೆ ಬರುವಾಗ ವ್ಯಕ್ತಿಯೊಬ್ಬರು ಪ್ಯಾಲೆಸ್ಟೈನ್ ಧ್ವಜವನ್ನು ಹಾರಿಸಿದ್ದಾರೆ. ಸ್ವಾತಂತ್ರ ಸಂಗ್ರಾಮಕ್ಕೆ ಸಾಕ್ಷಿಯಾದ ಅಂಕೋಲಾದಲ್ಲಿ ಏಕಾಏಕಿ ಇಂಥ ಧ್ವಜ ಹಾರಾಟ ನಡೆದಿದ್ದು ಗೊಂದಲಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ಎದುರಾಗುವ ಮುನ್ನ ಪೊಲೀಸರು ಅಲ್ಲಿ ದೌಡಾಯಿಸಿದ್ದಾರೆ.
ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ ಅವರು ತಕ್ಷಣ ಆ ಧ್ವಜವನ್ನು ವಶಕ್ಕೆಪಡೆದಿದ್ದಾರೆ. ಧ್ವಜ ಹಾರಿಸಿದ ಯುವಕನನ್ನು ವಿಚಾರಣೆ ನಡೆಸಿ, `ಮತ್ತೆ ಇಂಥ ಧ್ವಜ ಪ್ರದರ್ಶಿಸುವ ಹಾಗಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಸೂಚನೆಯನ್ನು ಪಾಲಿಸಿದ ಬಳಿಕ ಮೆರವಣಿಗೆ ಮುಂದುವರಿಯಲು ಅವಕಾಶ ನೀಡಲಾಗಿದ್ದು, ಆ ಕ್ಷಣದಲ್ಲಿಯೇ ಪರಿಸ್ಥಿತಿ ತಿಳಿಗೊಳಿಸಿದ್ದರಿಂದ ಅಹಿತಕರ ಘಟನೆಗಳು ನಡೆದಿಲ್ಲ.
`ಅಂಕೋಲಾದಲ್ಲಿ ವಿವಿಧ ಸಮುದಾಯಗಳ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದು, ಕೆಲ ಕಿಡಿಗೇಡಿಗಳಿಂದ ಇಂಥ ಅಧ್ವಾನ ನಡೆಯುತ್ತಿದೆ. ಸಾರ್ವಜನಿಕ ಮೆರವಣಿಗೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಭಾವನೆಗಳಿಗೆ ಧಕ್ಕೆ ತರುವ ಅಥವಾ ಅನಗತ್ಯ ವಿವಾದಕ್ಕೆ ಕಾರಣವಾಗಬಹುದಾದ ಪ್ರದರ್ಶನಗಳ ಬಗ್ಗೆ ಎಚ್ಚರವಹಿಸಬೇಕು’ ಎಂದು ಅಲ್ಲಿನವರು ಹೇಳಿದ್ದಾರೆ.