`ಉತ್ತರ ಕನ್ನಡ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ. ರಾಜ್ಯ ಸರ್ಕಾರವೂ ಇದನ್ನು ತಿರಸ್ಕರಿಸಲಿದೆ’ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. ಸಿದ್ದಾಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು `ಮಸ್ಯೆಯಾಗುವ ಯಾವ ವರದಿಯನ್ನು ಸರ್ಕಾರ ಜಾರಿ ಮಾಡುವುದಿಲ್ಲ’ ಎಂಬ ಭರವಸೆ ನೀಡಿದ್ದಾರೆ.
Advertisement. Scroll to continue reading.
`ಕಸ್ತೂರಿ ರಂಗನ್ ವರದಿ ಜಾರಿಯಾದರೆ ಉತ್ತರ ಕನ್ನಡ ಜಿಲ್ಲೆಯ ಜನಜೀವನದ ಮೇಲೆ ಅತಿ ಗಂಭೀರ ಪರಿಣಾಮ ಬೀರಲಿದೆ. ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ರೈತಾಪಿ ವರ್ಗದ ದಿನನಿತ್ಯದ ಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಜನಜೀವನಕ್ಕೆ ಮಾರಕವಾಗಬಹುದಾದ ಈ ವರದಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ’ ಎಂದವರು ಹೇಳಿದ್ದಾರೆ. `ಈ ಕುರಿತು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರನ್ನು ಶಾಸಕರ ನಿಯೋಗ ಭೇಟಿ ಮಾಡಿದ್ದು, ಖಚಿತ ಭರವಸೆ ಸಿಕ್ಕಿದೆ’ ಎಂದಿದ್ದಾರೆ.
Advertisement. Scroll to continue reading.
`ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಹಿಂದಿನ ಅಧಿವೇಶನದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಲಾಗಿತ್ತು. ಆಗೀನ ಸೀಎಂ ಸಿದ್ದರಾಮಯ್ಯ ಅವರು ವರದಿ ಜಾರಿಗೊಳಿಸುವುದಿಲ್ಲ ಎಂದಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು, ಸಾಗರ ಶಾಸಕರು ಸೇರಿದಂತೆ ಈ ವರದಿಯಿಂದ ದುಷ್ಪರಿಣಾಮ ಎದುರಿಸಲಿರುವ ಹಲವು ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ’ ಎಂದವರು ವಿವರಿಸಿದರು. `ಉತ್ತರ ಕನ್ನಡ ಜಿಲ್ಲೆಯು ಕೈಗಾ, ಸೀಬರ್ಡ್ ನೌಕಾನೆಲೆ ಹಾಗೂ ವಿವಿಧ ವಿದ್ಯುತ್ ಯೋಜನೆಗಳಿಗಾಗಿ ಈಗಾಗಲೇ ಸಾಕಷ್ಟು ಭೂಮಿಯನ್ನು ತ್ಯಾಗ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಇಲ್ಲಿನ ಜನರು ತಮ್ಮ ಮನೆಗಳಿಂದ ಹೊರಗೆ ಬಂದು ನೆಮ್ಮದಿಯ ಜೀವನ ನಡೆಸುವುದೇ ಕಷ್ಟವಾಗಲಿದೆ. ಹೀಗಾಗಿಯೇ ಪಕ್ಷಭೇದ ಮರೆತು ಜಿಲ್ಲೆಯ ಎಲ್ಲ ಶಾಸಕರು ಒಗ್ಗೂಡಿ ವರದಿಯನ್ನು ವಿರೋಧಿಸಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.