ಒoದೇ ಬಗೆಯ ಸಮವಸ್ತ್ರ ಧರಿಸಿದ ವ್ಯಕ್ತಿಗಳಿಬ್ಬರು ಅಂಗಡಿ ಅಂಗಡಿಗೆ ಭೇಟಿ ನೀಡಿ ಕಳ್ಳತನಕ್ಕಿಳಿದಿದ್ದಾರೆ. ಮಾತಿನಲ್ಲಿಯೇ ಮೋಡಿ ಮಾಡಿ, ಅಂಗಡಿಯಲ್ಲಿದ್ದವರನ್ನು ಅವರಿಬ್ಬರು ಯಾಮಾರಿಸುತ್ತಿದ್ದಾರೆ.
ಮುಂಡಗೋಡಿನ ಕೆಲ ಅಂಗಡಿಗಳಿಗೆ ಅಪರಿಚಿತರಿಬ್ಬರು ಭೇಟಿ ನೀಡಿದ್ದಾರೆ. ವಿವಿಧ ಬಗೆಯ ನಾಣ್ಯ ನೀಡಿದ ಅವರು ಅದಕ್ಕೆ ತಕ್ಕ ನೋಟುಗಳನ್ನು ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದವರ ಗಮನ ಬೇರೆ ಕಡೆ ಸೆಳೆದು ಅಲ್ಲಿದ್ದ ಬೆಳೆ ಬಾಳುವ ವಸ್ತುಗಳನ್ನು ಜೇಬಿಗಿಳಿಸುತ್ತಿದ್ದಾರೆ. ಕೆಲವು ಕಡೆ `ನಾವು ಹೊಸದಾಗಿ ಅಂಗಡಿ ತೆರೆಯುತ್ತಿದ್ದೇವೆ. ಹೀಗಾಗಿ ನಿಮ್ಮಲ್ಲಿರುವ ನೋಟುಗಳನ್ನು ಕೊಡಿ. ಸೀರೀಸಿ ಸಂಖ್ಯೆಯ ನೋಟು ಕೊಡಿ’ ಎಂದು ಸಹ ಅವರು ಮಾತನಾಡಿದ್ದಾರೆ. ಹೀಗೆ ಮಾತನಾಡತ್ತಲೇ ಅಂಗಡಿಯಲ್ಲಿದ್ದ ಹಣ-ಒಡವೆ ಎಗರಿಸಿದ್ದಾರೆ.
ಈ ಹಿನ್ನಲೆ ಅವರಿಬ್ಬರ ಫೋಟೋ ಬಿಡುಗಡೆ ಮಾಡಿದ ಪೊಲೀಸರು ಎಚ್ಚರಿಕೆವಹಿಸುವಂತೆ ಸೂಚಿಸಿದ್ದಾರೆ. ಈ ವ್ಯಕ್ತಿಗಳಿಬ್ಬರು ಯಾರು? ಎಲ್ಲಿಯವರು? ಎಂದು ಈವರೆಗೂ ಗೊತ್ತಾಗಿಲ್ಲ. ಮುಂಡಗೋಡು ಹೊರತುಪಡಿಸಿ ಬೇರೆ ಕಡೆಯೂ ಅವರು ಇದೇ ರೀತಿ ಕಳ್ಳತನ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಅವರಿಬ್ಬರ ಬಗ್ಗೆ ಸಾರ್ವಜನಿಕರು ಎಚ್ಚರಿಕೆವಹಿಸಬೇಕು. ಜೊತೆಗೆ ಅವರು ಕಾಣಿಸಿದರೆ 112ಗೆ ಫೋನ್ ಮಾಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.