`ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವುದರಿಂದ ಅಪಾಯ ಎದುರಾಗುವ ಮುನ್ನ ಎಚ್ಚರಿಕೆವಹಿಸಲು ಸಾಧ್ಯ’ ಎಂದು ಶಿರಸಿ ತಾಲೂಕು ಆರೋಗ್ಯ ಅಧಿಕಾರಿ ಡಾ ಮಧುಕರ ಪಾಟೀಲ್ ಅವರು ಹೇಳಿದ್ದಾರೆ. ವಿವಿಧ ಸಂಘ-ಸoಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅವರು ಮಾರಿಕಾಂಬಾ ದೇಗುಲ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿದ್ದು, ಅಲ್ಲಿ ಈ ಸಲಹೆ ನೀಡಿದ್ದಾರೆ.
ಜನರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುತ್ತಿರುವ ಅಸ್ಮಿತೆ ಫೌಂಡೇಶನ್ ಅವರ ಜೊತೆ ಶ್ರೀ ಮಾರಿಕಾಂಬಾ ದೇವಸ್ಥಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನು ವಿಕಾಸ ಸಂಸ್ಥೆ, ಗ್ರೀನ್ ಕೇರ್, ಸಂಕಲ್ಪ ಟ್ರಸ್ಟ್ ಹಾಗೂ ಭಾರತೀಯ ಕ್ಯಾನ್ಸರ್ ಸೊಸೈಟಿಯವರ ಸಹಯೋಗದಲ್ಲಿ ಈ ಶಿಬಿರ ನಡೆದಿದೆ. `ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡುತ್ತದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮನೋಭಾವ ಬೆಳೆಸಲು ಶಿಬಿರಗಳು ಸಹಾಯ ಮಾಡುತ್ತವೆ. ಇಂಥ ಶಿಬಿರಗಳಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ’ ಎಂದವರು ಹೇಳಿದ್ದಾರೆ. `ಆರೋಗ್ಯಕರ ಜೀವನ ನಡೆಸಲು ಇಂಥ ಶಿಬಿರಗಳು ಸಹಕಾರಿಯಾಗಿವೆ. ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸೇವೆ ಶ್ಲಾಘನೀಯ’ ಎಂದವರು ಹೇಳಿದ್ದಾರೆ.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಅವರು ಮಾತನಾಡಿ `ಆರೋಗ್ಯದ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯವಹಿಸಬಾರದು. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸೂಕ್ತ ಸಮಯದಲ್ಲಿ ಸೂಕ್ತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು. ಅಸ್ಮಿತೆ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಮಾತನಾಡಿ `ಸಂಸ್ಥೆಯು ಜಿಲ್ಲೆಯಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕುರಿತು ಕೆಲಸ ಮಾಡುತ್ತಿದ್ದು ಕ್ಯಾನ್ಸರ್ ಅಂದರೆ ಭಯ ಬಿಟ್ಟು ತಪಾಸಣೆ ಮಾಡಿಸಿಕೊಂಡು ಕ್ಯಾನ್ಸರ್ ಎರಡು ಹೆಜ್ಜೆ ಮುಂದೆ ಇರಬೇಕು’ ಎಂದರು. ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ರವಿ ಬೆಳ್ಳೆಮನೆ ಅವರು ಮಾತನಾಡಿ `ದೇವಾಲಯದ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಆರೋಗ್ಯದ ಸುರಕ್ಷತೆ ಮತ್ತು ಕಾಳಜಿಗಾಗಿ ಇಂತಹ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಅತ್ಯಂತ ಪ್ರಶಂಸನೀಯವಾಗಿದೆ’ ಎಂದರು.
ಶಿಬಿರದಲ್ಲಿ ಅಸ್ಮಿತೆ ಫೌಂಡೇಶನ್ ಸಂಸ್ಥೆಯು ಭಾರತೀಯ ಕ್ಯಾನ್ಸರ್ ಸೊಸೈಟಿಯವರ ಸಹಕಾರದಲ್ಲಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರ ತಂಡದಿAದ ಉಚಿತ ತಪಾಸಣೆ ನಡೆಯಿತು. ಕ್ಯಾನ್ಸರ್‌ನ ಆರಂಭಿಕ ಪತ್ತೆ, ತಡೆಗಟ್ಟುವಿಕೆ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಶಿಬಿರಾರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಜಾಗೃತಿ ಮೂಡಿಸಲಾಯಿತು. `ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಚಿಕಿತ್ಸೆಯ ಫಲಿತಾಂಶ ಉತ್ತಮವಾಗಿರುತ್ತದೆ’ ಎಂದು ವೈದ್ಯರು ವಿವರಿಸಿದರು. ಈ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಎಐ ತಂತ್ರಜ್ಞಾನದ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಯಂತ್ರದ ಮೂಲಕ ಕ್ಷಯರೋಗ, ನ್ಯುಮೋನಿಯಾ ಸೇರಿದಂತೆ ಶ್ವಾಸಕೋಶದ 12ಕ್ಕೂ ಹೆಚ್ಚು ಆರೋಗ್ಯ ತೊಂದರೆಗಳನ್ನು ಕೆಲವೇ ಸೆಕೆಂಡುಗಳಲ್ಲಿ ಶೇ. 90ಕ್ಕೂ ಹೆಚ್ಚು ನಿಖರತೆಯೊಂದಿಗೆ ರೋಗ ಪತ್ತೆಹಚ್ಚುವ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಉತ್ತರ ಕನ್ನಡದ ಅಧ್ಯಕ್ಷ ಮಹೇಶ್ ಡಿ. ನಾಯಕ್, ಗ್ರೀನ್ ಕೇರ್ (ರಿ)ನ ಸದಸ್ಯ ಸುರೇಶ್ ಭಟ್ ಹಾಗೂ ಸಂಕಲ್ಪ ಟ್ರಸ್ಟ್’ನ ಅಧ್ಯಕ್ಷ ಕುಮಾರ್ ಪಟಾಗಾರ, ವೈದ್ಯರಾದ ಡಾ ಭಾರತಿ ಹೊಸಮನಿ, ಡಾ ಸ್ಮೃತಿ, ಡಾ ಮಮತಾ ಹೆಗಡೆ, ಡಾ ಮೇಘನಾ ಹಾಗೂ ಡಾ ಅರವಿಂದ್ ಅವರು ಇದ್ದರು. ಈ ಎಲ್ಲ ವೈದ್ಯರು ಸೇರಿ ಶಿಬಿರ ನಡೆಸಿಕೊಟ್ಟಿದ್ದು, ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕಿ ಗಿರಿಜಾ ಹೆಗಡೆ ಅವರು ಭಾಗವಹಿಸಿದ್ದರು. 100ಕ್ಕೂ ಅಧಿಕ ಸಿಬ್ಬಂದಿ ಶಿಬಿರದ ಪ್ರಯೋಜನಪಡೆದರು. ಗ್ರೀನ್ ಕೇರ್ ಸಂಸ್ಥೆಯ ಜಿತೇಂದ್ರಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿದರು.