ಯಲ್ಲಾಪುರ ಹಾಗೂ ಮುಂಡಗೋಡು ತಾಲೂಕನ್ನು ಸರ್ಕಾರ ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಬರ ಪೀಡಿತ ಪ್ರದೇಶ ಎಂದು ಘೋಷಣೆಯಾಗಿರುವ ಕಾರಣ ಇಲ್ಲಿನ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಈ ಎರಡು ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆಯಿರುವ ಕಾರಣ ಈ ಘೋಷಣೆ ಮಾಡಲಾಗಿದೆ. ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ವಿವಿಧ ದಾಖಲೆಗಳನ್ನು ಸರ್ಕಾರಕ್ಕೆ ಮುಟ್ಟಿಸಿದ್ದು, ಬರ ಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿದ್ದರು. ಆ ಅಂಕಿ-ಸoಖ್ಯೆಗಳ ಅಧ್ಯಯನ ನಡೆಸಿದ ಸರ್ಕಾರ ಯಲ್ಲಾಪುರ ಹಾಗೂ ಮುಂಡಗೋಡು ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ.
ಮಳೆಯ ಅಭಾವದಿಂದ ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಗಮನಕ್ಕೆ ತಂದಿದ್ದರು. ಅದಾದ ನಂತರ ಕಂದಾಯ ಸಚಿವರಿಗೆ ಸಹ ಇಲ್ಲಿನ ಪರಿಸ್ಥಿತಿ ವಿವರಿಸಿದ್ದರು. ಆ ಬಗ್ಗೆ ಅಧಿಕಾರಿಗಳಿಗೂ ಮನವರಿಕೆ ಮಾಡಿಕೊಟ್ಟಿದ್ದರು. ಈ ಎಲ್ಲಾ ಹಿನ್ನಲೆ ಈ ಘೋಷಣೆಯಾಗಿದೆ. ಬರ ಪೀಡಿತ ಎಂದು ಘೋಷಣೆ ಹಿನ್ನಲೆ ಕುಡಿಯುವ ನೀರಿನ ಕೆಲಸಗಳಿಗೆ ಸರ್ಕಾರ ಒತ್ತು ನೀಡುವ ಸಾಧ್ಯತೆಗಳಿವೆ. ಬೆಳೆ ವಿಮೆ ಪರಿಹಾರಗಳು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಲಕ್ಷಣಗಳಿವೆ.
`ಈ ಘೋಷಣೆಯಿಂದ ಬರಗಾಲದ ಪರಿಣಾಮದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸರ್ಕಾರದ ವಿವಿಧ ಪರಿಹಾರ ಹಾಗೂ ನೆರವು ಯೋಜನೆಗಳು ದೊರೆಯಲು ಅನುಕೂಲವಾಗಲಿದೆ’ ಎಂದು ಶಿವರಾಮ ಹೆಬ್ಬಾರ್ ಅವರು ಹೇಳಿದ್ದಾರೆ.