ಐಷಾರಾಮಿ ಕಾರಿನಲ್ಲಿ ಬಂದು ರಸ್ತೆ ಪಕ್ಕ ಮಲಗಿದ್ದ ದನ ಕದ್ದು ಹೋಗಿದ್ದ ಮೂವರನ್ನು ಕುಮಟಾ ಪೊಲೀಸರು ಪತ್ತೆ ಮಾಡಿದ್ದಾರೆ. ಅವರಲ್ಲಿ ಒಬ್ಬ ಸಿಕ್ಕಿಬಿದ್ದಿದ್ದು, ಮತ್ತಿಬ್ಬರು ಹುಡುಕಾಟ ಮುಂದುವರೆದಿದೆ.
ಸೆಪ್ಟೆಂಬರ್ 10ರಂದು ಕುಮಟಾದ ರೈಸ್ ಮಿಲ್ ಪಕ್ಕ ದನವೊಂದು ಮಲಗಿತ್ತು. ಮಂಗಳೂರಿನಿಂದ ಕಾರಿನಲ್ಲಿ ಬಂದ ಮೂವರು ನಸುಕಿನ 2 ಗಂಟೆಗೆ ಆ ಜಾನುವಾರನ್ನು ಅಪಹರಿಸಿದ್ದರು. ದನವನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಜಾನುವಾರು ಕದ್ದಿರುವ ಬಗ್ಗೆ ಬಗ್ಗೋಣದ ನಾಗೇಶ ಲಕ್ಷಣ ನಾಯಕ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಕುಮಟಾ ಪಿಐ ಯೋಗೇಶ ಅವರು 60 ಸಿಸಿ ಕ್ಯಾಮರಾ ದಾಖಲೆ ಶೋಧ ನಡೆಸಿದರು. ಬಿಳಿ ಬಣ್ಣದ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಕಳ್ಳರು ಬಂದಿದ್ದನ್ನು ಪಿಸೈ ಖಾದರ್ ಭಾಷಾ, ರವಿ ಗುಡ್ಡಿ, ವಿಠ್ಠಲ ಮಡವಲಕರ್ ಅವರು ಕಂಡುಕೊಂಡರು.
ಪೊಲೀಸ್ ಸಿಬ್ಬಂದಿ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಸೇರಿ ಆ ಕಾರಿನ ಶೋಧ ನಡೆಸಿದರು. ಮಂಗಳೂರು ಬೈಂಕಪಾಡಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ ಮಹಮದ್ ಶಬ್ಬೀರ ಅವರು ಈ ವೇಳೆ ಸಿಕ್ಕಿ ಬಿದ್ದಿದ್ದು, ಸದ್ಯ ಬಜಪೆಯ ಜರಿಯಲ್ಲಿ ವಾಸವಾಗಿದ್ದ ಅವರನ್ನು ಪೊಲೀಸರು ಬಂಧಿಸಿದರು. ಉಡುಪಿ ಕಾಪುವಿನ ಮಹಮದ್ ಆಜೀಪ್ ಹಾಗೂ ಮಂಗಳೂರು ಉಲ್ಲಾಳದ ಜುಲ್ಪಾನ್ ಮಾಲಿಕ್ ಜೊತೆ ಸೇರಿ ಮಹಮದ್ ಶಬ್ಬೀರ್ ಜಾನುವಾರು ಕದ್ದಿರುವುದನ್ನು ಒಪ್ಪಿಕೊಂಡರು. ಈ ಕಾರ್ಯಾಚರಣೆಗೆ ಉಡುಪಿ ಪೊಲೀಸರು ಸಹಕಾರ ನೀಡಿದ್ದು, ಮತ್ತಿಬ್ಬರನ್ನು ಹುಡುಕುವ ಪ್ರಯತ್ನ ಮಾಡಿದರು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಡಿವೈಎಸ್ಪಿ ರಾನು ಗುಪ್ತ ಅವರು ಶ್ಲಾಘಿಸಿದರು.