ಕಾರವಾರದ ಕೈಗಾದಲ್ಲಿ 5 ಹಾಗೂ 6ನೇ ಅಣು ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಸ್ಥಳೀಯರಿಗೆ ಮಾತ್ರ ಅದರಿಂದ ಪ್ರಯೋಜನವಾಗುತ್ತಿಲ್ಲ. ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಕಲ್ಲುಗಳನ್ನು ಸಹ ಬೇರೆ ಭಾಗದವರಿಂದ ಪಡೆಯುತ್ತಿರುವುದರಿಂದ ಇಲ್ಲಿನ ಲಾರಿ ಮಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಸ್ವತಃ ಜಿಲ್ಲಾಧಿಕಾರಿ ಸೂಚನೆ ನೀಡಿದರೂ ಕೈಗಾದ ಅಧಿಕಾರಿಗಳು ಬೆಲೆ ಕೊಡದ ಕಾರಣ ಲಾರಿ ಮಾಲಕರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ 16ರಿಂದ ಕೈಗಾದಲ್ಲಿ ಧರಣಿ ನಡೆಸುವುದಾಗಿ ಲಾರಿ ಮಾಲಕರ ಸಂಘದವರು ಘೋಷಿಸಿದ್ದಾರೆ. `ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕೊಡಬೇಕು. ಶೇ 80ರಷ್ಟು ಸರಕು-ಸಾಮಗ್ರಿಗಳನ್ನು ಸ್ಥಳೀಯರಿಂದಲೇ ಖರೀದಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಸೂಚಿಸಿದನ್ನು ಸರಿಯಾಗಿ ಪಾಲಿಸಬೇಕು’ ಎಂದು ಲಾರಿ ಮಾಲಕರು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
`ಅಣು ಘಟಕ ನಿರ್ಮಾಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ವಸ್ತುಗಳ ಅಗತ್ಯವಿದೆ. ಆದರೆ, ಅಣು ಘಟಕದ ಅಧಿಕಾರಿಗಳು ಅದನ್ನು ಬೇರೆ ಭಾಗದವರಿಂದ ಪಡೆಯುತ್ತಿದ್ದಾರೆ. ಅಣು ಘಟಕ ನಿರ್ಮಾಣದಿಂದ ಸ್ಥಳೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ಅನ್ಯಾಯವಾಗಿದ್ದು, ಸದ್ಯ ಹೊಸ ಘಟಕ ನಿರ್ಮಾಣ ಅವಧಿಯಲ್ಲಿಯೂ ಉದ್ಯೋಗಕ್ಕೆ ಒತ್ತು ನೀಡಿಲ್ಲ. ಸರಕು-ಸಾಮಗ್ರಿಗಳ ಪೂರೈಕೆಯ ಹೊಣೆಯನ್ನು ಸಹ ಸ್ಥಳೀಯರಿಗೆ ನೀಡಿಲ್ಲ’ ಎಂದವರು ದೂರಿದ್ದಾರೆ. `ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ ನಂತರ ಶೇ 80ರಷ್ಟು ಉದ್ಯೋಗ ಅವಕಾಶವನ್ನು ಸ್ಥಳೀಯರಿಗೆ ನೀಡುವ ಬಗ್ಗೆ ಅವರು ಕೈಗಾ ಸೈಟ್ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಮುಖ ಬೇಡಿಕೆ ಈಡೇರಿಸುವಲ್ಲಿಯೂ ಕೈಗಾ ಅಧಿಕಾರಿಗಳು ಎಡವಿದ್ದಾರೆ’ ಎಂದು ದೂರಿದರು.
`ಸ್ಥಳೀಯರಿಂದಲೇ ಸಾರಿಗೆ ಹಾಗೂ ಸರಕು ಸಾಮಗ್ರಿಪಡೆಯಬೇಕು. ಅದಕ್ಕೆ ಸೂಕ್ತ ದರ ನಿಗದಿ ಮಾಡಬೇಕು. ಡೀಸಿ ಆದೇಶ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು’ ಎಂದು ಆಗ್ರಹಿಸಿ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.