ಯಲ್ಲಾಪುರದ ಜೋಡುಕೆರೆಯಲ್ಲಿ ವರ್ಷದ ಹಿಂದೆ ಮೊಸಳೆ ಕಾಣಿಸಿಕೊಂಡಿದ್ದು, ಈವರೆಗೂ ಆ ಮೊಸಳೆಯ ಸ್ಥಳಾಂತರ ಸಾಧ್ಯವಾಗಿಲ್ಲ. ಸದ್ಯ ಗಣೇಶ ಹಬ್ಬದ ಹಿನ್ನಲೆ ಅದೇ ಕೆರೆಯಲ್ಲಿ ಗಣಪನ ವಿಗ್ರಹಗಳ ವಿಸರ್ಜನೆ ನಡೆಯಲಿದೆ. ಮೊಸಳೆಯಿಂದ ಯಾವುದೇ ಅನಾಹುತ ನಡೆಯದಂತೆ ತಡೆಯಲು ಅರಣ್ಯ ಇಲಾಖೆ ಮುನ್ನಚ್ಚರಿಕೆವಹಿಸಿದೆ.
ಯಲ್ಲಾಪುರ ಪಟ್ಟಣದ ಜೋಡುಕೆರೆಯಲ್ಲಿ ಕಳೆದ ಕೆಲವು ತಿಂಗಳುಗಳಿAದ ಆಗಾಗ ಮೊಸಳೆ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಸಿಬ್ಬಂದಿ ದಿನವಿಡೀ ಕಾದರೂ ಅವರಿಗೆ ಆ ಮೊಸಳೆ ಸಿಗುತ್ತಿಲ್ಲ. ವಿಶೇಷ ಕಾರ್ಯಾಚರಣೆ ನಡೆಸಿದರೂ ಮೊಸಳೆ ಹಿಡಿಯುವುದು ಸಾಧ್ಯವಾಗಿಲ್ಲ. ಸದ್ಯ ಗಣೇಶ ಚತುರ್ಥಿ ಸಂದರ್ಭದಲ್ಲಿ ಪಟ್ಟಣದ ಗಣೇಶ ಮೂರ್ತಿಗಳ ವಿಸರ್ಜನೆ ಇದೇ ಕೆರೆಯ ಭಾಗದಲ್ಲಿ ನಡೆಯಲಿರುವುದರಿಂದ ಈ ಕೆರೆಗೆ ಬಲೆ ಅಳವಡಿಸಲು ಅರಣ್ಯ ಸಿಬ್ಬಂದಿ ನಿರ್ಧರಿಸಿದ್ದಾರೆ.
ಯಲ್ಲಾಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಜೋಡುಕೆರೆಯಲ್ಲಿ ಮೊಸಳೆ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲು ಕರಾವಳಿ ಭಾಗದ ಅಶೋಕ್ ನಾಯ್ಕ್ ಅವರನ್ನು ಕರೆಯಿಸಲಾಗಿತ್ತು. ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಗ್ನಿಶಾಮಕ ವಾಹನ, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪತ್ರಕರ್ತರು ಹಾಗೂ ಸಾರ್ವಜನಿಕರು ಸೇರಿ ಮೊಸಳೆ ಹುಡುಕಾಟ ನಡೆಸಿದರು. ಆದರೆ, ಈ ದಿನವೂ ಮೊಸಳೆ ಕಾಣಿಸಲಿಲ್ಲ. ಈ ತಂಡದ ಸದಸ್ಯರು ಕೆರೆಯ ಆಳ-ಅಗಲ ಹುಡುಕಾಟ ಮಾಡಿದರೂ ಮೊಸಳೆಯ ಸುಳಿವು ಸಿಗಲಿಲ್ಲ. 15 ದಿನಗಳಿಂದ ಮೊಸಳೆ ಕಾಣದಿರುವ ಕಾರಣ ಅಲ್ಲಿಯೇ ಗಣೇಶನ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದ್ದು, ಮುನ್ನಚ್ಚರಿಕಾ ಕ್ರಮವಾಗಿ ಕೆರೆ ನಡುವೆ ಸಂರಕ್ಷಣಾ ಬೇಲಿ ಅಳವಡಿಸುವ ಕಾರ್ಯ ನಡೆಯಿತು.
Advertisement. Scroll to continue reading.
ಮೊಸಳೆ ಕೆರೆಯ ಕೆಳಭಾಗದಿಂದ ಮೇಲ್ಭಾಗದ ದಡದತ್ತ ಬಾರದಂತೆ ತಡೆಯಲು ನೀರಿನಲ್ಲಿ ಅಳವಡಿಸುವ ಬಲೆಯನ್ನು ಕೆರೆಯ ಮಧ್ಯಭಾಗದಲ್ಲಿ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಈ ಬಲೆಯನ್ನು ದಾಟದಂತೆ ಅರಣ್ಯ ಇಲಾಖೆಯವರು ಮನವಿ ಮಾಡಿದ್ದಾರೆ.