ಧಾರವಾಡದಲ್ಲಿ ಕಟಿಂಗ್ ಶಾಫ್ ನಡೆಸುವ ಮಂಜುನಾಥ ಜುಂಜವಾಡಕರ್ ಅವರು ಆಗಾಗ ಬ್ಲೇಡ್ ಹಿಡಿದು ಹಳಿಯಾಳಕ್ಕೆ ಬರುತ್ತಿದ್ದು, ಆ ಬ್ಲೇಡಿನಿಂದ ಅಜ್ಜಿಯೊಬ್ಬರ ಕತ್ತಿನಲ್ಲಿದ್ದ ಸರ ಕತ್ತರಿಸಿದ್ದಾರೆ. 1.20 ಲಕ್ಷ ರೂ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿದ್ದ ಮಂಜುನಾಥ ಜುಂಜವಾಡಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹಳಿಯಾಳ ಹಂಪಿಹೊಳಿಯಲ್ಲಿ ಶಾಂತವ್ವ ದುರ್ಗವ್ವ ಕಮ್ಮಾರ್ ಅವರು ವಾಸವಾಗಿದ್ದಾರೆ. 85 ವರ್ಷದ ಅವರು ಕೊರಳಿನಲ್ಲಿ ಚಿನ್ನದ ಮಾಲೆ ಧರಿಸಿದ್ದು, ಅದನ್ನು ಅದೇ ಊರಿನ ಮಂಜುನಾಥ ಜುಂಜವಾಡಕರ್ ಅವರು ನೋಡಿದ್ದಾರೆ. ಆಗಾಗ ಊರಿಗೆ ಬರುತ್ತಿದ್ದ ಮಂಜುನಾಥ ಜುಂಜವಾಡಕರ್ ಅವರು ಸೆಪ್ಟೆಂಬರ್ 7ರಂದು ಅಜ್ಜಿಯ ಮನೆಗೆ ಬಂದು ಅವರನ್ನು ಹೆದರಿಸಿದ್ದಾರೆ. ಶಾಂತವ್ವ ಕಮ್ಮಾರ್ ಅವರ ಕೊರಳಿನಲ್ಲಿದ್ದ ಚಿನ್ನವನ್ನು ಬ್ಲೇಡಿನಿಂದ ಕೊಯ್ದು ಅವರು ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ದರ್ಶನ್ ಕಮ್ಮಾರ್ ಅವರು ಮನೆಗೆ ಬಂದಿದ್ದು, ಆಗ ಚಿನ್ನ ದರೋಡೆಯಾದ ಬಗ್ಗೆ ಶಾಂತವ್ವ ಅವರು ಮೊಮ್ಮಗನ ಬಳಿ ಹೇಳಿದ್ದಾರೆ. ಧಾರವಾಡದಲ್ಲಿ ಕಟಿಂಗ್ ಶಾಫ್ ನಡೆಸುವ ಮಂಜುನಾಥ ಜುಂಜವಾಡಕರ್ ಅವರೇ ಹೆದರಿಸಿ ಚಿನ್ನ ಅಪಹರಿಸಿದ ಬಗ್ಗೆ ದೂರಿದ್ದಾರೆ. ದರ್ಶನ್ ಕಮ್ಮಾರ್ ಅವರು ಪೊಲೀಸ್ ಠಾಣೆಗೆ ತೆರಳಿ ಅಜ್ಜಿಯ ಬಳಿಯಿದ್ದ 1.20 ಲಕ್ಷ ರೂ ಮೌಲ್ಯದ 6 ಕೊಳವೆ, 4 ಗುಂಡು, 2 ತಾಳಿಯನ್ನು ಮಂಜುನಾಥ ಜುಂಜವಾಡಕರ್ ಕದ್ದಿರುವ ಬಗ್ಗೆ ದೂರು ನೀಡಿದ್ದಾರೆ.
Advertisement. Scroll to continue reading.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ಸೆಪ್ಟೆಂಬರ್ 10 ರಂದು ಧಾರವಾಡದ ತಪೋವನ ನಗರದಲ್ಲಿ ಹಳಿಯಾಳ ಮೂಲದ ಮಂಜುನಾಥ ಶಿವಾಜಿ ಜುಂಜವಾಡಕರ ಹಾಗೂ ಧಾರವಾಡದ ಹಳಗೇರಿಯ ಅರ್ಜುನ್ ಬಸಪ್ಪ ಹಡಪದ ಅವರನ್ನು ಬಂಧಿಸಿದ್ದಾರೆ. ಕದ್ದ ಚಿನ್ನದ ಜೊತೆ ಕಳ್ಳತನಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರ ಜೊತೆ ಹಳಿಯಾಳ ಸಿಪಿಐ ಭೀಮಣ್ಣ ಸೋರಿ, ಪಿಸೈ ಕುಮಾರ್ ಕಾಂಬಳೆ, ಮಹೇಶ ಮಾಳಿ ಕಾರ್ಯಾಚರಣೆ ನೇತ್ರತ್ವವಹಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಜಗದೀಶ ಕುಂಬಾರ್, ಶ್ರೀಶೈಲ್ ಜೆ ಎಂ, ವಿನೋದ ಜೆಬಿ, ಲಕ್ಷಣ ಪೂಜಾರಿ, ನಿಂಗಪ್ಪ ಬಳ್ಳಾರಿ, ಮಂಜುನಾಥ ಬಾಲಿ, ಬಸವರಾಜ ತ್ಯಾಪಿ, ಬಸವರಾಜ ಚವಡಿ, ಸೋಹೆಲ್ ನಾಗನೂರು ಅವರು ಈ ವಿಷಯದಲ್ಲಿ ಸಾಹಸ ಮಾಡಿದ್ದಾರೆ. ಗಂಗಾಧರ ತಳಮನಿ ಹಾಗೂ ಉಮೇಶ್ ತೇಲಿ ಅವರು ಜೀಪ್ ಚಾಲಕರಾಗಿದ್ದು, ಅವರು ಕಳ್ಳರ ಪತ್ತೆಗೆ ಶ್ರಮಿಸಿದ್ದಾರೆ.