ಬರಿಗಣ್ಣಿನಲ್ಲಿ ನೋಡಿದವರಿಗೆ ಸಹ ಕುಮಟಾ ಬಿಜ್ಜೂರಿನ ಸುಕ್ರಿ ಗೌಡ ಅವರ ಅಂಗವೈಕಲ್ಯ ಗೊತ್ತಾಗುತ್ತದೆ. ಆದರೆ, ಕನ್ನಡಕ ಹಾಕಿ ನೋಡುವ ಅಧಿಕಾರಿಗಳಿಗೆ ಸುಕ್ರಿ ಗೌಡ ಅವರ ಅಂಗವೈಕಲ್ಯತೆ ಕಾಣುತ್ತಿಲ್ಲ. ಹೀಗಾಗಿ ಅವರಿಗೆ ಸರ್ಕಾರದಿಂದ ಬರಬೇಕಾದ ಅಂಗವಿಕಲ ವೇತನ ಸಿಗುತ್ತಿಲ್ಲ.
Advertisement. Scroll to continue reading.
ಕುಮಟಾದ ಗೋಕರ್ಣ ಬಳಿಯ ಬಿಜ್ಜೂರಿನ ಬೇಲೆಗದ್ದೆ ಆಚಾರಿ ಮನೆಯಲ್ಲಿ ಸುಕ್ರಿ ಗೌಡ ಅವರು ವಾಸವಾಗಿದ್ದಾರೆ. ಅವರು ತಮ್ಮ ಎರಡು ಕಾಲಿನ ಸ್ವಾಧೀನ ಕಳೆದುಕೊಂಡಿದ್ದು, ಸಹೋದರರ ಸಹಾಯವಿಲ್ಲದೇ ಓಡಾಡಲು ಕಷ್ಟಪಡುತ್ತಾರೆ. ಅದಾಗಿಯೂ, ಅವರು ಕಳೆದ 10 ವರ್ಷದಿಂದ ಅಂಗವಿಕಲ ವೇತನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ತಮಗೆ ನ್ಯಾಯಯುತವಾಗಿ ಬರಬೇಕಾದ ಪಿಂಚಣಿಗಾಗಿ ಪರದಾಡುತ್ತಿದ್ದಾರೆ. ಕಣ್ಣಿದ್ದು ಕುರುಡಾಗಿರುವ ಅಧಿಕಾರಿಗಳು ಕನ್ನಡಕಧರಿಸಿ ನೋಡಿದರೂ ಸುಕ್ರಿ ಗೌಡ ಅವರ ಅಂಗವಿಕಲತೆ ಅವರಿಗೆ ಕಾಣುತ್ತಿಲ್ಲ. ಹೀಗಾಗಿ ಸುಕ್ರಿ ಗೌಡ ಅವರಿಗೆ ಅಂಗವಿಕಲ ವೇತನ ಸಿಗುತ್ತಿಲ್ಲ.
52 ವರ್ಷದ ಸುಕ್ರಿ ಗೌಡ ಅವರಿಗೆ 10 ವರ್ಷದ ಹಿಂದೆ ಅಂಗವಿಕಲ ವೇತನ ಸಿಗುತ್ತಿತ್ತು. ಒಮ್ಮೆಲೆ ಅದು ನಿಂತು ಹೋಯಿತು. ಈ ಬಗ್ಗೆ ವಿಚಾರಿಸಿದಾಗ `ಆಧಾರ್ ಕಾರ್ಡ ಲಿಂಕ್ ಆದರೆ ಬರುತ್ತದೆ’ ಎಂದರು. ಅಲ್ಲಿ-ಇಲ್ಲಿ ಓಡಾಟ ಮಾಡಿದ ಸುಕ್ರಿ ಗೌಡ ಅವರು ಆಧಾರ್ ಕಾರ್ಡ ಸಮಸ್ಯೆ ಬಗೆಹರಿಸಿಕೊಂಡರು. ಆದರೆ, ಅದಾದ ನಂತರ ಅವರಿಗೆ `ವಿಕಲಚೇತನ ಬಗ್ಗೆ ಧೃಢೀಕರಣ ಬೇಕು’ ಎಂದು ಅಧಿಕಾರಿಗಳು ತಿಳಿಸಿದರು. ಮತ್ತೆ ಅಲೆದಾಟ ನಡೆಸಿದ ಅವರು ಕಾರವಾರಕ್ಕೆ ಹೋಗಿ ತಪಾಸಣೆಗೆ ಒಳಗಾದರು. 2024ರಲ್ಲಿ ಜಿಲ್ಲಾಸ್ಪತ್ರೆಯವರು ತಪಾಸಣೆ ನಡೆಸಿ ವಿಕಲ ಚೇತನ ಪ್ರಮಾಣ ಪತ್ರ ಕಳುಹಿಸಿದರು. ಅಂಗವಿಕಲ ಪ್ರಮಾಣ ಪತ್ರಪಡೆದು ಎರಡು ವರ್ಷ ಕಳೆದರೂ ಸುಕ್ರಿ ಗೌಡ ಅವರಿಗೆ ಅಂಗವಿಕಲ ವೇತನ ಮಾತ್ರ ಬರಲಿಲ್ಲ. ಆ ಬಗ್ಗೆ ವಿಚಾರಿಸಿದರೂ ಅವರಿಗೆ ಸೂಕ್ತ ಉತ್ತರ ಸಿಗುತ್ತಿಲ್ಲ.
Advertisement. Scroll to continue reading.
ಸುಕ್ರಿ ಗೌಡ ಅವರಿಗೆ ತಂದೆ ಇಲ್ಲ. ತಾಯಿಯೂ ಇಲ್ಲ. ಅಣ್ಣ ನಾಗರಾಜ ಗೌಡ ಅವರ ಆಶ್ರಯದಲ್ಲಿ ಅವರು ಬದುಕುತ್ತಿದ್ದು, ವಿಕಲ ಚೇತನರಿಗೆ ಸಿಗುವ ಪಿಂಚಣಿ ಸಿಕ್ಕರೆ ಕುಟುಂಬಕ್ಕೆ ಅದು ನೆರವಾಗಲಿದೆ. ಈ ಪಿಂಚಣಿ ಪಡೆಯುವುದಕ್ಕಾಗಿ ಸುಕ್ರಿ ಗೌಡ ಅವರನ್ನು ಹೆಗಲ ಮೇಲೆ ಹೊತ್ತು ಅವರ ಸಹೋದರ ಎಲ್ಲಾ ಕಡೆ ಅಲೆದಾಟ ನಡೆಸಿ ಸುಸ್ತಾಗಿದ್ದಾರೆ. ದಿನದ ದುಡಿಮೆ ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುವುದೇ ಅವರಿಗೆ ದೊಡ್ಡ ಹೊರೆಯಾಗಿದೆ.