`ಅನೇಕ ಶಾಲೆಗಳು ಮಕ್ಕಳಿಲ್ಲದೇ ಮುಚ್ಚಿದ್ದು, ಅಂಥವುಗಳನ್ನು ಗುಡಿ ಕೈಗಾರಿಕೆ ನಡೆಸುವವರಿಗೆ ಕೊಡಬೇಕು’ ಶಿರಸಿಯ ಸಮಾನ ಮನಸ್ಕರು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ. `17 ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ 142 ಸರ್ಕಾರಿ ಶಾಲೆಗಳು ಮುಚ್ಚಿದ್ದು, ಅದನ್ನು ಹಿಂದುಳಿದ ಬಡ ಮಹಿಳೆಯರ ಗುಡಿ ಕೈಗಾರಿಕೆಗೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಮಹಿಳೆಯರು ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಚಿಪ್ಸ್ ತಯಾರಿಕೆ, ತಿನಿಸುಗಳ ಸಿದ್ಧಪಡಿಸುವಿಕೆ, ಹೂ-ಹಣ್ಣು ಪ್ರದರ್ಶನ ಮತ್ತು ಮಾರಾಟ, ನೆಯ್ಗೆ, ಹೊಲಿಗೆಯಂಥ ಕಸೂತಿ ಕೆಲಸ ಮಾಡಿ ಸ್ವ ಉದ್ಯೋಗ ಮಾಡಿಕೊಂಡವರಿದ್ದಾರೆ. ಖಾಲಿ ಬಿದ್ದ ಸರ್ಕಾರಿ ಶಾಲೆಗಳ ಕಟ್ಟಡವನ್ನು ಅಂಥವರಿಗೆ ನೀಡಿದರೆ ಅದರ ಸದ್ಬಳಕೆ ಆಗಲಿದೆ’ ಎಂದು ಶಿರಸಿ ಮುಖ್ಯನಾಲಾ (ರಾಜಕಾಲುವೆ) ಮತ್ತು ಶಿರಸಿ ನಗರಾಭಿವೃದ್ಧಿ ಹೋರಾಟ ಸಮಿತಿ (ನಗರ ಮತ್ತು ಗ್ರಾಮೀಣ) ಸಂಘಟನೆಯವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
`ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಯಾವ ಉದ್ದೇಶಕ್ಕೆ ಭೂಮಿ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸದೇ ಇದ್ದರೆ ಅದನ್ನು ಹಿಂಪಡೆಯುವುದಾಗಿ ವಿಧಾನ ಪರಿಷತ್ ಉತ್ತರಿಸಿದೆ. ವಿಧಾನ ಪರಿಷತ್ ಸದಸ್ಯ ಶಿವಕುಮಾರ ಅವರು ಕೇಳಿದ ಪ್ರಶ್ನೆಗೆ ಅಗಸ್ಟ 19ರಂದು ಈ ಉತ್ತರ ಸಿಕ್ಕಿರುವುದು ಸಮಾಧಾನಕರ. ಹೀಗೆ ಶಾಶ್ವತವಾಗಿ ಬಾಗಿಲು ಹಾಕಿದ ಶಾಲೆಗಳ ಸಬ್ದಳಕೆ ಮಾಡುವುದು ಮುಖ್ಯವಾಗಿದ್ದು, ಗ್ರಾಮೀಣ ಪ್ರವಾಸೋದ್ಯಮ ಬೆಳಸುವುದಕ್ಕಾಗಿ ಶಾಲಾ ಕಟ್ಟಡವನ್ನು ಗುಡಿ ಕೈಗಾರಿಕೆಗೆ ಕೊಡಬೇಕು. ಪ್ರವಾಸಿಗರ ಆಕರ್ಷಣೆ ಹೆಚ್ಚಿಸಲು ಅಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದು ಸಂಘಟನೆಯ ದೀಪಕ ರೇವಣಕರ್, ಜಿ ಎಲ್ ಹೆಗಡೆ ಹಾಗೂ ಪತ್ರಕರ್ತ ಅಶೋಕ ಹಾಸ್ಯಗಾರ ಅವರು ಮನವಿ ಸಲ್ಲಿಸಿದ್ದಾರೆ.
Advertisement. Scroll to continue reading.