`ಕಾರವಾರ-ಅಂಕೋಲಾ ಹಾಗೂ ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಕಾರವಾರ-ಕೈಗಾ-ಯಲ್ಲಾಪುರ-ಮುಂಡಗೋಡ-ಬoಕಾಪುರ-ಹಾವೇರಿ-ಇಳಕಲ್-ಹನುಮಸಾಗರ ಮಾರ್ಗದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು’ ಎಂದು ಜನಶಕ್ತಿ ವೇದಿಕೆ ಆಗ್ರಹಿಸಿದೆ.
Advertisement. Scroll to continue reading.
ಅಂಕೋಲಾದ ಸತ್ಯಾಗ್ರಹ ಸಭಾಭವನದಲ್ಲಿ ನಡೆದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿಯಾದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ಕುರಿತು ಪತ್ರ ನೀಡಿದ್ದಾರೆ. ಶಾಸಕ ಸತೀಶ್ ಸೈಲ್ ಹಾಗೂ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಈ ಬಗ್ಗೆ ಆಗ್ರಹಿಸಿದ್ದಾರೆ. `ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಸಮನ್ವಯ ಸಾಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. `ಕೈಗಾ ಪ್ರದೇಶದಲ್ಲಿ ನಡೆಯುತ್ತಿರುವ ಸುಮಾರು 50 ಸಾವಿರ ಕೋಟಿ ರೂಪಾಯಿಯ ಐದು ಮತ್ತು ಆರನೇ ಘಟಕದ ಮಹತ್ವದ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರತಿ ದಿನ ಭಾರೀ ಪ್ರಮಾಣದ ಸರಕು ಸಾಗಣೆ ವಾಹನಗಳು, ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ಹಾಗೂ ಇತರ ಭಾರೀ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ಈಗಾಗಲೇ ಕಿರಿದಾಗಿರುವ ರಸ್ತೆಯ ಮೇಲೆ ಸಂಚಾರದ ಒತ್ತಡ ಹೆಚ್ಚಾಗಿ ರಸ್ತೆ ಹಲವು ಕಡೆಗಳಲ್ಲಿ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಈ ರಸ್ತೆಯ ಅಗಲ ಕಡಿಮೆಯಾಗಿರುವುದರಿಂದ ಭಾರೀ ವಾಹನಗಳು ಹಾಗೂ ಸಾರ್ವಜನಿಕ ವಾಹನಗಳು ಒಂದೇ ಸಮಯದಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಪಘಾತದ ಅಪಾಯವೂ ಹೆಚ್ಚುತ್ತಿದೆ. ಹೀಗಾಗಿ ರಸ್ತೆ ಅಗಲೀಕರಣ, ಬಲಪಡಿಸುವಿಕೆ ಹಾಗೂ ಆಧುನೀಕರಣ ಅತ್ಯಂತ ಅಗತ್ಯವಾಗಿದೆ’ ಎಂದು ಜನಶಕ್ತಿ ವೇದಿಕೆಯವರು ಹೇಳಿದ್ದಾರೆ. `ಕಾರವಾರ-ಕೈಗಾ-ಬಾರೆ-ಕಳಚೆ-ಇಡಗುಂದಿ ಮೂಲಕ ಯಲ್ಲಾಪುರ ಹಾಗೂ ಅಲ್ಲಿಂದ ಬಂಕಾಪುರ-ಮುoಡಗೋಡ-ಹಾವೇರಿ-ಇಳಕಲ್-ಹನುಮಸಾಗರದವರೆಗೆ ಉತ್ತಮ ಸಂಪರ್ಕ ಕಲ್ಪಿಸುವ ಮೂಲಕ ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಸುತ್ತಮುತ್ತಲಿನ ಪ್ರದೇಶಗಳ ನಡುವೆ ಸುಗಮ ರಸ್ತೆ ಸಂಪರ್ಕ ಸಾಧ್ಯವಾಗಲಿದೆ’ ಎಂದವರು ವಿವರಿಸಿದ್ದಾರೆ. `ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಯಾದರೆ ಕೃಷಿ ಉತ್ಪನ್ನಗಳ ಸಾಗಣೆ, ವ್ಯಾಪಾರ-ವಹಿವಾಟು, ಕೈಗಾರಿಕಾ ಚಟುವಟಿಕೆಗಳು, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಗ್ರಾಮೀಣ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನ ದೊರೆಯಲಿದೆ’ ಎಂದು ಹೇಳಿದ್ದಾರೆ.
Advertisement. Scroll to continue reading.
`ಕೈಗಾ ಪ್ರದೇಶವು ಅತ್ಯಂತ ಮಹತ್ವದ ಕೈಗಾರಿಕಾ ಮತ್ತು ಅಣುಶಕ್ತಿ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಅಥವಾ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಒಂದೇ ಪ್ರಮುಖ ರಸ್ತೆಯ ಮೇಲೆ ಅವಲಂಬಿತರಾಗಿರುವುದು ಸೂಕ್ತವಲ್ಲ. ತುರ್ತು ಸಂದರ್ಭದಲ್ಲಿ ಮುಖ್ಯ ರಸ್ತೆ ಸಂಚಾರಕ್ಕೆ ಅಡಚಣೆಯಾದರೆ ಪರ್ಯಾಯ ಮಾರ್ಗವಾಗಿ ಬಳಸಬಹುದಾದ ಸುಸಜ್ಜಿತ ಸಂಪರ್ಕ ರಸ್ತೆ ಅತ್ಯಗತ್ಯ’ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಜನಶಕ್ತಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯ್ಕ್ ಅವರು ಈ ವಿಷಯವಾಗಿ ಬೆಳಕು ಚೆಲ್ಲಿದ್ದಾರೆ.