`ವಿಧಾನಸಭಾ ಅಧೀವೇಶನದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಚರ್ಚೆ ನಡೆಸಬೇಕು. ಜೊತೆಗೆ `ರಾಜ್ಯ ಸರ್ಕಾರವೂ ವೈಜ್ಞಾನಿಕ ವಿಶ್ಲೇಷಣೆ ಜೊತೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಪತ್ರ ಬರೆದಿದೆ. ಡೀಸಿ ಕೆ ಲಕ್ಷಿಪ್ರಿಯಾ ಅವರ ಮೂಲಕ ಈ ಪತ್ರವನ್ನು ರವಾನಿಸಿದೆ.
`ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸುವ ಕಸ್ತೂರಿ ರಂಗನ್ ವರದಿ ಆದರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಗೆ ಕರ್ನಾಟಕ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸುವುದು ಅತೀ ಮುಖ್ಯ. ಈ ಬಗ್ಗೆ ರಾಜ್ಯ ಸರಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಕೂಲಂಕುಷವಾಗಿ ಚರ್ಚಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ. `ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಸುಮಾರು 40 ಲಕ್ಷ ಜನರಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಆತಂಕ ಮೂಡಿದ್ದು, ಅವರ ಜೀವನೋಪಾಯ ಹಾಗೂ ಹಿತಾಸಕ್ತಿಗೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಆಗ್ರಹಿಸಿದ್ದಾರೆ.
`ಕಸ್ತೂರಿ ರಂಗನ್ ವರದಿಗೆ ಸಂಬoಧಿಸಿದoತೆ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಕೇಂದ್ರ ಸರಕಾರದ ಪ್ರಸ್ತಾವನೆಗಳಿಗೆ ತಿರಸ್ಕರಿಸಿ ತಿಳಿಸಲಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೂ ರಾಜ್ಯ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಬೇಕು. ವೈಜ್ಞಾನಿಕ ತಳಹದಿಯಲ್ಲಿ ಪರಿಶೀಲನೆ ನಡೆಯಬೇಕು’ ಎಂದವರು ಒತ್ತಾಯಿಸಿದ್ದಾರೆ. `ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು 2013ರಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಬಾಹ್ಯಾಕಾಶ ಮೂಲಕ ಸರ್ವೆ ಮಾಡಿ ವರದಿ ಸಲ್ಲಿಸಿತ್ತು. ವರದಿಯಲ್ಲಿ ದೇಶದ ಆರು ರಾಜ್ಯಗಳ ಸುಮಾರು 56,000 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಶಿಫಾರಸು ಮಾಡಲಾಗಿದ್ದು, ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶ ಇದರಲ್ಲಿ ಸೇರಿದೆ’ ಎಂದು ವಿವರಿಸಲಾಗಿದೆ.
Advertisement. Scroll to continue reading.
`ಉತ್ತರ ಕನ್ನಡ ಜಿಲ್ಲೆ ಹಲವಾರು ರಾಷ್ಟ್ರೀಯ ಯೋಜನೆಗಳಿಗೆ ಸಾವಿರಾರು ಹೆಕ್ಟೇರ್ ಭೂಮಿ ನೀಡಿದೆ. ಅಲ್ಪ ಸ್ವಲ್ಪ ಭೂಮಿಯನ್ನು ಪರಿಸರ ಸೂಕ್ಷ್ಮ ಎಂದು ಮಾಡಿದರೆ ಮನುಷ್ಯನ ಬದುಕಿಗೂ ತೊಂದರೆ ಆಗಲಿದೆ’ ಎಂಬ ಅಂಶವನ್ನು ಪತ್ರದಲ್ಲಿ ಬರೆಯಲಾಗಿದೆ. ಈ ಸಮಿತಿಯ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಪದಾಧಿಕಾರಿಗಳಾದ ಗೌರೀಶ ನಾಯಕ, ಸಂತೋಷ ನಾಯ್ಕ ಜರಡಿ, ಯಮುನಾ ಗಾಂವ್ಕರ, ಎಂ ಎ ಖತೀಬ, ಶೇಕಪ್ಪ ಮುಂತಾದವರು ಈ ಪತ್ರ ರವಾನಿಸಿದ್ದಾರೆ.