ಅಂಕೋಲಾ ಅಗಸೂರು ಬಳಿಯ ಸರಳೆಬೈಲಿನಲ್ಲಿರುವ `ಸಂಗೀತಾ ಡಾಬಾ’ದಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದ್ದು, ಅಧಿಕಾರಿಗಳು ಡಾಬಾದ ಮೇಲೆ ದಾಳಿ ಮಾಡಿದ್ದಾರೆ. ಆಗ, ಅಲ್ಲಿ ಮಕ್ಕಳಿಬ್ಬರು ಕಷ್ಟಪಡುತ್ತಿರುವುದು ಗಮನಕ್ಕೆ ಬಂದಿದೆ.
ಸoಗೀತಾ ಡಾಬಾದಲ್ಲಿ ಮಕ್ಕಳಿಗೆ ಪುಕ್ಕಟ್ಟೆ ಊಟ ಕೊಡುವ ಆಮೀಷ ಒಡ್ಡಿ ಕೆಲಸಕ್ಕೆ ನಿಯೋಜಿಸಲಾಗಿದ್ದು, ಅವರನ್ನು ಅತ್ಯಂತ ಶೋಚನೀಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಈಚೆಗೆ ಡಾಬಾಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ಮಕ್ಕಳ ಕಷ್ಟ ಅರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ಮಾಹಿತಿ ಅನ್ವಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ದಿನ ಅಲ್ಲಿಗೆ ಹೋಗಿದ್ದರು. ಗ್ರಾಹಕರ ಸೋಗಿನಲ್ಲಿ ಹೋದ ಅಧಿಕಾರಿಗಳು ಮಕ್ಕಳಿಬ್ಬರನ್ನು ಮಾತನಾಡಿಸಿ, ವಿವಿಧ ಮಾಹಿತಿ ಸಂಗ್ರಹಿಸಿದರು. ಅದಾದ ನಂತರ ತಾವು ಕಾರ್ಮಿಕ ಇಲಾಖೆಯವರು ಎಂದು ಪರಿಚಯಿಸಿಕೊಂಡು ಡಾಬಾ ಮಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.
ಡಾಬಾದಲ್ಲಿ ದುಡಿಯುತ್ತಿದ್ದ ಮಕ್ಕಳಿಬ್ಬರನ್ನು ಅಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಅಲ್ಲಿ ವಿಚಾರಣೆ ಮುಗಿದ ನಂತರ ಅವರನ್ನುಕಾರವಾರದ ಸರ್ಕಾರಿ ಬಾಲಮಂದಿರಕ್ಕೆ ಕರೆದೊಯ್ದು ಆಶ್ರಯ ನೀಡಲಾಗಿದೆ. ಅಪ್ರಾಪ್ತರಿಗೆ ಆಮೀಷ ಒಡ್ಡಿ ಅವರನ್ನು ದುಡಿಸಿಕೊಳ್ಳುತ್ತಿದ್ದ ಹೊಟೇಲಿನವರ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement. Scroll to continue reading.