ಸಿದ್ದಾಪುರದ ನಾಮದಾರಿ ಅಭಿವೃದ್ಧಿ ಸಂಘದ ಅನುದಾನ ದುರ್ಬಳಕೆ ನಡೆದ ಬಗ್ಗೆ ಆರೋಪವ್ಯಕ್ತವಾಗಿದ್ದು, ಗುರುವಾರ ನಡೆದ ಸಭೆಯಲ್ಲಿ ಅದೇ ವಿಷಯವಾಗಿ ಗದ್ದಲ ನಡೆದಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಇಲ್ಲಿ ದುರುಪಯೋಗಪಡಿಸಿಕೊಂಡಿರುವ ಆರೋಪವ್ಯಕ್ತವಾಗಿದೆ.
ಸಿದ್ದಾಪುರದ ಬಾಲಭವನದಲ್ಲಿ ಗುರುವಾರ ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಸಭೆ ಶುರುವಾಗಿತ್ತು. ಆ ವೇಳೆ ಕೆಲವರು ಅಲ್ಲಿಗೆ ಆಗಮಿಸಿ `ಸಂಘದಲ್ಲಿ ನಮಗೆ ಸದಸ್ಯತ್ವ ಕೊಡುತ್ತಿಲ್ಲ’ ಎಂದು ಆಕ್ಷೇಪಿಸಿದರು. `ಎಲ್ಲರಿಗೂ ಇಲ್ಲಿ ಮುಕ್ತ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು. `ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದಲ್ಲಿ ವ್ಯಾಪಕ ಅಕ್ರಮ ಹಾಗೂ ಅನುದಾನ ದುರ್ಬಳಕೆ ನಡೆದಿದ್ದು, ಹಾಲಿ ಸಂಘವನ್ನು ತಕ್ಷಣವೇ ಅಮಾನತುಗೊಳಿಸಬೇಕು’ ಎಂದು ಸಹ ಕೆಲವರು ಒತ್ತಾಯಿಸಿದರು. `ಜಿಲ್ಲಾ ನೋಂದಣಾಧಿಕಾರಿಗಳ ಮೂಲಕ ಸೂಕ್ತ ಕ್ರಮ ಜರುಗಿಸಬೇಕು’ ಎಂದು ನಾಮದಾರಿ ಸಮುದಾಯದ ಕೆಲ ಪ್ರಮುಖರು ಪಟ್ಟುಹಿಡಿದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಪ್ರವೇಶಿಸಿ ಸಮಾಧಾನ ಮಾಡುವ ಪ್ರಯತ್ನ ನಡೆಸಿದರು.
`2003ರಲ್ಲಿ ನೋಂದಣಿಯಾಗಿರುವ ಈ ಸಂಘವು ಸಮಾಜದ ಸರ್ವ ಸದಸ್ಯರ ಯಾವುದೇ ಅಧಿಕೃತ ಸಭೆ ಕರೆದಿಲ್ಲ. ತಮಗೆ ಬೇಕಾದ ಕೆಲವೇ ವ್ಯಕ್ತಿಗಳನ್ನು ಸಂಘದಲ್ಲಿ ಇಟ್ಟುಕೊಂಡು, ಸಮಾಜ ಬಾಂಧವರಿಗೆ ಮುಕ್ತ ಸದಸ್ಯತ್ವ ನೀಡದೆ ವಂಚಿಸಲಾಗುತ್ತಿದೆ’ ಎಂದು ಅಲ್ಲಿದ್ದವರು ದೂರಿದರು. `ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನುಬಾಹಿರವಾಗಿ ಸಭೆ ನಡೆಸುವ ಮೂಲಕ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ’ ಎಂದು ಕೆಲವರು ದೂರಿದರು. `ಸಭೆಯಲ್ಲಿ ಪ್ರಶ್ನಿಸಲು ಬಂದವರಿಗೆ ಅವಮಾನ ಮಾಡಲಾಗಿದೆ. ಗೂಂಡಾಗಿರಿ ಪ್ರದರ್ಶಿಸಲಾಗಿದೆ. ಹೀಗಾಗಿ ಈ ಆಡಳಿತ ಮಂಡಳಿಯನ್ನು ವಜಾ ಮಾಡಬೇಕು’ ಎಂದು ಕೆಲವರು ಒತ್ತಾಯಿಸಿದರು.
Advertisement. Scroll to continue reading.
ಕೊನೆಗೆ ಈ ಎಲ್ಲಾ ವಿಷಯದ ಬಗ್ಗೆ ಪ್ರಮುಖರು ತಹಶೀಲ್ದಾರರನ್ನು ಭೇಟಿ ಮಾಡಿ ಚರ್ಚಿಸಿದರು. ತಹಶೀಲ್ದಾರ್ ಮಂಜುಳಾ ನಾಯಕ ಅವರು ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಅದಾದ ನಂತರ ಸಂಘದ ವಿಸರ್ಜನೆಗೆ ಆಗ್ರಹಿಸಿ ಕೆಲವರು ಮನವಿಯನ್ನು ಸಲ್ಲಿಸಿದರು.