ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಈ ದಿನ ಕಸದ ಗಾಡಿ ಓಡಿಸಿದ್ದಾರೆ. `ಎಲ್ಲರೂ ಈ ಗಾಡಿಯಲ್ಲಿಯೇ ಕಸ ಹಾಕಬೇಕು’ ಎಂದವರು ಮನವಿಯನ್ನೂ ಮಾಡಿದ್ದಾರೆ.
Advertisement. Scroll to continue reading.
ಗೋಕರ್ಣ ಗ್ರಾಮ ಪಂಚಾಯತವೂ 12.5 ಲಕ್ಷ ರೂ ವೆಚ್ಚದಲ್ಲಿ ಹೊಸದಾಗಿ ಕಸ ಸಂಗ್ರಹಣಾ ವಾಹನ ಖರೀದಿಸಿದೆ. ಅದರ ಉದ್ಘಾಟನೆಗೆ ಆಗಮಿಸಿದ್ದ ದಿನಕರ ಶೆಟ್ಟಿ ಅವರು ಆ ಗಾಡಿ ಓಡಿಸಿ, ಜನರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ. `ಹೊಟೇಲ್ ರೆಸಾರ್ಟಗಳ ತ್ಯಾಜ್ಯ ವಿಲೇವಾರಿ ಬಗ್ಗೆ ಯಾವ ಒಬ್ಬ ಅಧಿಕಾರಿಯೂ ನಿಗಾವಹಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ತಿಳಿಸಿದರೂ ಕ್ರಮವಾಗಿಲ್ಲ. ಗ್ರಾ ಪಂ ಅಧಿಕಾರಿಗಳು ನಿತ್ಯ ತಮ್ಮ ಕಚೇರಿಯನ್ನು ಸ್ವಚ್ಛವಾಗಿರಿಸಿಕೊಂಡು, ಊರಿನ ಸ್ವಚ್ಛತೆಯ ಬಗ್ಗೆಯೂ ಗಮನಹರಿಸಬೇಕು’ ಎಂದವರು ಕಿವಿಮಾತು ಹೇಳಿದ್ದಾರೆ.
`ಗೋಕರ್ಣ ಗ್ರಾಮ ಪಂಚಾಯತವನ್ನು ಮೇಲ್ದರ್ಜೇಗೇರಿಸುವ ಬಗ್ಗೆ ಸತತ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಪುರಸಭೆ ಮಾಡಬೇಕು ಎಂಬ ನಿಲುವಿದೆ’ ಎಂದು ಈ ವೇಳೆ ಅವರು ಹೇಳಿದ್ದಾರೆ. `ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಚತೆಯೇ ಸವಾಲಾಗಿದ್ದು ಹೆಚ್ಚಿನ ಅನುದಾನ, ಅಭಿವೃಧ್ದಿ ಕಾರ್ಯಕ್ಕೆ ಈ ಊರನ್ನು ಪುರಸಭೆ ಮಾಡುವುದು ಅನಿವಾರ್ಯ’ ಎಂದಿದ್ದಾರೆ. ಕಸ ವಿಲೇವಾರಿ ಹಾಗೂ ಸ್ವಚ್ಚತೆಗೆ ಇಲ್ಲಿನ ಹೊಟೇಲ್ ಹಾಗೂ ರೆಸಾರ್ಟನವರು ಸಹಕಾರ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ದಿನಕರ ಶೆಟ್ಟಿ ಅವರು `ಮುಂದಿನ ದಿನದಲ್ಲಾದರೂ ಸ್ವಚ್ಚ ಪರಿಸರಕ್ಕೆ ಕೈಜೋಡಿಸಿ’ ಎಂದು ಕೇಳಿಕೊಂಡಿದ್ದಾರೆ. `ಸಿ.ಎಸ್.ಆರ್ ನಿಧಿಯಿಂದ ಮತ್ತೊಂದು ಕಸದ ವಾಹನ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಅದಕ್ಕೆ ಮಂಜೂರಿ ಸಿಕ್ಕಿಲ್ಲ. ಆ ಬಗ್ಗೆ ಸರ್ಕಾರದ ಗಮನಸೆಳೆಯುವೆ’ ಎಂದು ಸಹ ಅವರು ಈ ವೇಳೆ ಹೇಳಿದ್ದಾರೆ.
Advertisement. Scroll to continue reading.
ಈ ವೇಳೆ ಬಿ.ಜೆ.ಪಿ ಗೋಕರ್ಣ ಮಂಡಲ ಅಧ್ಯಕ್ಷ ಗಣೇಶ ಪಂಡಿತ್, ಗ್ರಾ ಪಂ. ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಹನೇಹಳ್ಳಿ ಗ್ರಾ. ಪಂ ಮಜಿ ಅಧ್ಯಕ್ಷ ಸಣ್ಣು ಗೌಡ, ತಾಪಂ. ಮಾಜಿ ಸದಸ್ಯ ಮಹೇಶ ಶೆಟ್ಟಿ, ಮಾಜಿ ಗ್ರಾ ಪಂ. ಸದಸ್ಯರಾದ ರಮೇಶ ಪ್ರಸಾದ, ಮುಂಜುನಾಥ ಶೆಟ್ಟಿ,ಗಣಪತಿ ನಾಯ್ಕ, ರಾಜೇಶ ನಾಯಕ, ಮಹೇಶ ನಾಯಕ, ಸುಜಯ ಶೆಟ್ಟಿ, ಪ್ರಮುಖರಾದ ಜಯರಾಮ ಹೆಗಡೆ, ಕುಮಾರ ದೀವಟಗಿ, ನಾಗೇಶ ಗೌಡ, ಶಂಕರ ಗೌಡ, ರಮೇಶ ಗೌಡ ಇತರರು ಇದ್ದರು.
Advertisement. Scroll to continue reading.