ಶಿರಸಿಯ ಪಯ್ಯು ಚೌಟಿ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮೇಲಧಿಕಾರಿಗಳ ಆದೇಶದ ಅನ್ವಯ ಪೊಲೀಸರು ಪಯ್ಯು ಚೌಟಿ ಅವರನ್ನು ಬಳ್ಳಾರಿಗೆ ಬಿಟ್ಟು ಬಂದಿದ್ದಾರೆ.
ಪಯ್ಯು ಚೌಟಿ ಅವರು ಮೊದಲು ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದರು. ಕೆಲ ಅಪರಾಧ ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದರು. ಈಚೆಗೆ ಅವರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಜಕೀಯ ನಾಯಕರ ಜೊತೆ ಅವರು ಸ್ನೇಹ ಬೆಳೆಸಿಕೊಂಡಿದ್ದು, ತಕ್ಕಮಟ್ಟಿಗೆ ಪ್ರಭಾವಶಾಲಿ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದರು. ಜೊತೆಗೆ ತಮ್ಮದೇ ಆದ ಬೆಂಬಲಿಗ ಪಡೆಯನ್ನು ಅವರು ಹೊಂದಿದ್ದರು.
ಶಾಂತಿ ಹಾಗೂ ಸುವ್ಯವಸ್ಥೆಗೆ ದಕ್ಕೆ ತರುವ ಆರೋಪದ ಹಿನ್ನಲೆ ಪಯ್ಯು ಚೌಟಿ ಅವರನ್ನು ಗಡಿಪಾರು ಮಾಡುವಂತೆ ಪೊಲೀಸರು ಶಿಫಾರಸ್ಸು ಮಾಡಿದ್ದರು. ಈ ಹಿನ್ನಲೆ ಮೇಲಾಧಿಕಾರಿಗಳು ಪಯ್ಯು ಚೌಟಿ ಅವರನ್ನು ಗಡಿಪಾರು ಮಾಡಿ ಆದೇಶಹೊರಡಿಸಿದ್ದರು. ಈ ಆದೇಶದ ಪ್ರಕಾರ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪಯ್ಯು ಚೌಟಿ ಅವರನ್ನು ಹಿಡಿದು ಬಳ್ಳಾರಿಗೆ ಕರೆದೊಯ್ದರು. ಈ ವಿಷಯ ಅರಿತು ಅವರ ಬೆಂಬಲಿಗರು ಪೊಲೀಸ್ ಠಾಣೆಗೆ ಬಂದು ಪ್ರಶ್ನಿಸಿದರು. ಕೆಲ ಕಾಲ ಪ್ರತಿಭಟನೆಯನ್ನು ನಡೆಸಿದರು.
Advertisement. Scroll to continue reading.
ಅದಾದ ನಂತರ ಪಯ್ಯು ಚೌಟಿ ಅವರ ಪರವಾಗಿ ಅವರ ಬೆಂಬಲಿಗರು ಜಾಲತಾಣದಲ್ಲಿ ಬರೆದುಕೊಂಡಿದ್ದು, `ಹಿಂದೂ-ಮಹಾಗಣಪತಿ ಮಂಡಳಿ ಯಶಸ್ಸು ಸಹಿಸದೇ ಈ ಕೃತ್ಯ ಮಾಡಲಾಗಿದೆ’ ಎಂದು ದೂರಿದ್ದಾರೆ. `ಈ ರೀತಿಯ ಕ್ರಮ ಜರುಗುವ ಮುನ್ಸೂಚನೆ ಹಿನ್ನಲೆ ಪಯ್ಯು ಚೌಟಿ ಅವರು ಮಾನವ ಹಕ್ಕು ಆಯೋಗ ಹಾಗೂ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರು’ ಎಂಬ ವಿಷಯವನ್ನು ಬರೆದುಕೊಂಡಿದ್ದಾರೆ. ಸದ್ಯ ಮುಂದಿನ ಆದೇಶದವರೆಗೆ ಪಯ್ಯು ಚೌಟಿ ಅವರು ಉತ್ತರ ಕನ್ನಡಕ್ಕೆ ಬರುವ ಹಾಗಿಲ್ಲ ಎಂದು ಆದೇಶಿಸಿದ್ದಾರೆ.