ಫೋನ್ ಪೇ ಮೂಲಕ ಹಣ ಪಾವತಿ ಮಾಡಿರುವುದಾಗಿ ಸುಳ್ಳು ಹೇಳಿದ ಕಳ್ಳನೊಬ್ಬ ಮೊಬೈಲ್ ಮಳಿಗೆಯಲ್ಲಿದ್ದ ಮಹಿಳೆಗೆ ನಕಲಿ ಸ್ಕಿನ್‌ಶಾಟ್ ತೋರಿಸಿದ್ದು, ಅದನ್ನು ನೋಡಿದ ಮಹಿಳೆ ಮೊಬೈಲ್ ಕೊಟ್ಟು ಕಳುಹಿಸಿದ್ದಾರೆ. ಖಾತೆಗೆ ಹಣ ಜಮಾ ಆಗದಿರುವುದನ್ನು ಗಮನಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಕುಮಟಾದ ಹೊಸ ಬಸ್ ನಿಲ್ದಾಣದ ಪಕ್ಕ `ಮಾತೋಶ್ರೀ ಏಜೆನ್ಸೀಸ್’ ಎಂಬ ಮೊಬೈಲ್ ಮಳಿಗೆಯೊಂದಿದೆ. ಕೂಜಳ್ಳಿಯ ಧನಂಜಯ ಮಂಜುನಾಥ ನಾಯ್ಕ ಅವರು ಅಲ್ಲಿ ಮೊಬೈಲ್ ಮಾರಾಟ ಮಾಡುತ್ತಿದ್ದಾರೆ. ಮೊಬೈಲ್ ಮಾರಾಟದ ಕೆಲಸಕ್ಕೆ ಅವರು ಯುವತಿಯೊಬ್ಬರನ್ನು ನೇಮಿಸಿಕೊಂಡಿದ್ದು, ಸೆಪ್ಟೆಂಬರ್ 10ರ ಮಧ್ಯಾಹ್ನ ಮೊಬೈಲ್ ಖರೀದಿಗೆ ಬಂದ ವ್ಯಕ್ತಿಯೊಬ್ಬರು ಆ ಯುವತಿಯನ್ನು ಯಾಮಾರಿಸಿದ್ದಾರೆ. 16700ರೂ ಮೌಲ್ಯದ ರಿಯಲ್ ಮೀ ಮೊಬೈಲ್ ಆರಿಸಿದ ಆ ಅಪರಿಚಿತ ಫೋನ್ ಪೇ ಮೂಲಕ ಹಣ ಪಾವತಿಸಿರುವುದಾಗಿ ಹೇಳಿ, ನಕಲಿ ಸ್ಕಿನ್‌ಶಾಟ್ ಮೆಸೆಜ್ ಕಾಣಿಸಿದ್ದಾರೆ. ಅದಾದ ನಂತರ ಆ ಮೊಬೈಲನ್ನು ಪಡೆದು ಅಲ್ಲಿಂದ ಪರಾರಿಯಾಗಿದ್ದಾರೆ.
ಇದಾಗಿ ದಿನ ಕಳೆದರೂ ಖಾತೆಗೆ ಹಣ ಬಾರದ ಬಗ್ಗೆ ಧನಂಜಯ ನಾಯ್ಕ ಅವರು ತಲೆಕೆಡಿಸಿಕೊಂಡಿದ್ದಾರೆ. ಆಗ, ತಾವು ಮೋಸ ಹೋಗಿರುವುದು ಅವರಿಗೆ ಗೊತ್ತಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗಮನಿಸಿ ಮೋಸ ಮಾಡಿದವನ ಮುಖ ನೋಡಿದ್ದಾರೆ. ಆತನನ್ನು ಎಲ್ಲಿಯೂ ನೋಡಿದ ನೆನಪಿಲ್ಲದ ಕಾರಣ ಸ್ನೇಹಿತರಲ್ಲಿಯೂ ವಿಚಾರಿಸಿದ್ದಾರೆ. ಆದರೆ, ಮೋಸ ಮಾಡಿ ಮೊಬೈಲ್ ಕದ್ದ ವ್ಯಕ್ತಿ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಧನಂಜಯ ನಾಯ್ಕ ಅವರ ದೂರು ಆಲಿಸಿದ ಕುಮಟಾ ಪೊಲೀಸರು ಮೊಬೈಲ್ ಕಳ್ಳನ ವಿರುದ್ಧ ಕೇಸು ದಾಖಲಿಸಿದ್ದು, ಅಪರಿಚಿತನ ಹುಡುಕಾಟ ಶುರು ಮಾಡಿದ್ದಾರೆ.
Advertisement. Scroll to continue reading.