ಬಡವರಿಗೆ ನೀಡಿದ್ದ ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಕಾಳಸಂತೆಯಲ್ಲಿ ಮಾರಾಟಕ್ಕೆ ಪ್ರಯತ್ನಿಸಿದ್ದ ವ್ಯಕ್ತಿಯೊಬ್ಬರನ್ನು ಯಲ್ಲಾಪುರ ಪೊಲೀಸರು ಹಿಡಿದಿದ್ದಾರೆ. ಕಲಘಟಗಿಯ ಶಾರೂಕ್ ನೇಸರಗಿ ಅವರು ಅಕ್ಕಿ ಸಾಗಾಟದ ವೇಳೆಯಲ್ಲಿಯೇ ಸಿಕ್ಕಿ ಬಿದ್ದಿದ್ದಾರೆ.
ಶಿರಸಿ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಕಳ್ಳ ಸಂತೆಯಲ್ಲಿ ಅಕ್ಕಿ ಸಾಗಾಟ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ. ಸದ್ಯ ಅಲ್ಲಿನ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಖಚಿತ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ 30 ಚೀಲದಲ್ಲಿ ತುಂಬಿದ್ದ ಅಕ್ಕಿ ಸಿಕ್ಕಿದೆ. ಕಲಘಟಗಿಯ ಶಾರೂಕ್ ನಜೀರ್ ಅಹ್ಮದ್ ನೇಸರಗಿ ಅವರು ತಮ್ಮ ಸರಕು ಸಾಗಾಣಿಕಾ ವಾಹನದಲ್ಲಿ ಅಕ್ಕಿ ಸಾಗಿಸುವಾಗ ಪೊಲೀಸರ ಜೊತೆ ಯಲ್ಲಾಪುರದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಯಲ್ಲಾಪುರ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ರಾಘವೇಂದ್ರ ರಾಮಾ ಗೌಡ ಅವರಿಗೆ ಶಿರಸಿ ತಹಶೀಲ್ದಾರ್ ಕಚೇರಿಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ದುರುಪಯೋಗದ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನಲೆ ಸೆಪ್ಟೆಂಬರ್ 12ರ ರಾತ್ರಿ ಅವರು ಯಲ್ಲಾಪುರ ಪಿಸೈ ಮಹಾವೀರ ಕಾಂಬಳೆ ಅವರ ಸಹಾಯ ಯಾಚಿಸಿದ್ದಾರೆ. ತಕ್ಷಣ ಪೊಲೀಸರ ತಂಡ ನೂತನ ನಗರ ಜಡ್ಡಿಯ ಬಳಿ ಹೋಗಿದ್ದು, ಅಲ್ಲಿನ ಮಸೀದಿ ಬಳಿಯಿದ್ದ ಟಾಟಾ ಇಂಟ್ರಾ ವಾಹನವನ್ನು ಪರಿಶೀಲಿಸಿದೆ. ಆಗ ಅಲ್ಲಿ 51 ಸಾವಿರ ರೂ ಮೌಲ್ಯದ ಅಕ್ಕಿ ಸಿಕ್ಕಿದೆ. ಅನ್ನಭಾಗ್ಯ ಯೋಜನೆ ಅಡಿ ವಿತರಿಸಿದ ಅಕ್ಕಿಯನ್ನು ಕದ್ದು ಸಾಗಿಸುತ್ತಿರುವುದು ಈ ವೇಳೆ ಗಮನಕ್ಕೆ ಬಂದಿದೆ.