19ನೇ ವಯಸ್ಸಿನಲ್ಲಿಯೇ ಅಪರಾಧ ಪ್ರಪಂಚಕ್ಕೆ ಕಾಲಿರಿಸಿದ ಶಿರಸಿಯ ಪಯ್ಯು ಚೌಟಿ ಅವರು 19 ಅಪರಾಧ ಕೃತ್ಯಗಳಲ್ಲಿ ಆರೋಪಿತರಾಗಿದ್ದಾರೆ. 1998ರಲ್ಲಿ ಮೊದಲ ಕೇಸಿನ ಮೂಲಕ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಅವರು 2026ರವರೆಗೂ ಒಂದಿಲ್ಲೊoದು ಗಲಾಟೆಯಲ್ಲಿ ಭಾಗಿಯಾಗಿದ್ದು, ಅದರ ಪರಿಣಾಮ ಇದೀಗ ಬಳ್ಳಾರಿ ಜೈಲು ಸೇರಿದ್ದಾರೆ.
ಶಿರಸಿಯ ಕಸ್ತೂರಿಬಾನಗರದ ಬಸವೇಶ್ವರ ಕಾಲೋನಿಯಲ್ಲಿ ಫಯಾಜ್ ಮದಾರ್ ಸಾಬ್ ಚೌಟಿ ಅವರು ವಾಸವಾಗಿದ್ದರು. ಪಯ್ಯು ಚೌಟಿ ಎಂದೇ ಅವರು ಪ್ರಸಿದ್ಧರಾಗಿದ್ದು, ರಾಜಕೀಯ ಪ್ರಭಾವದೊಂದಿಗೆ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. 1998ರ ಅವಧಿಯಲ್ಲಿ ಪಯ್ಯು ಚೌಟಿ ಅವರಿಗೆ 19 ವರ್ಷ. ಆ ಅವಧಿಯಲ್ಲಿಯೇ ಅವರು ಶಾಂತಿಭoಗ ಹಾಗೂ ಗಲಭೆ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯವರು ಪಯ್ಯು ಚೌಟಿ ಅವರ ಮೇಲೆ ಆ ವೇಳೆ ಮೊದಲ ಕೇಸು ದಾಖಲಿಸಿದ್ದರು. ಅದಾದ ನಂತರ ಪಯ್ಯು ಚೌಟಿ ಅವರು 20ನೇ ವಯಸ್ಸಿನಲ್ಲಿ ಮತ್ತೆ ಗಲಾಟೆ, ಹಲ್ಲೆ ನಡೆಸಿದ ಆರೋಪದ ಅಡಿ ಮತ್ತೊಂದು ಕೇಸು ಎದುರಿಸಿದರು. ಅದಾದ ನಂತರ 2000ನೇ ಇಸ್ವಿಯಲ್ಲಿ ಮತ್ತೆ ಹಲ್ಲೆ, ಶಾಂತಿಭAಗ ಮಾಡಿದ ಕಾರಣ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದರು. ಅದಾದ ನಂತರ ಹೆಚ್ಚುಕಡಿಮೆ ಪ್ರತಿ ವರ್ಷವೂ ಪಯ್ಯು ಚೌಟಿ ಅವರ ವಿರುದ್ಧ ಒಂದಿಲ್ಲೊAದು ಕೇಸುಗಳು ದಾಖಲಾದವು. 2003ರಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ 2004ರ ಒಂದೇ ವರ್ಷ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಮೂರು ಕೇಸುಗಳು ಅವರ ಮೇಲಿದ್ದವು.
2006ರಲ್ಲಿ ಮಾತ್ರ ಪಯ್ಯು ಚೌಟಿ ಅವರು ಯಾವುದೇ ದೊಡ್ಡ ಗಲಾಟೆಯಲ್ಲಿ ಭಾಗವಹಿಸಲಿಲ್ಲ. ಆದರೆ, 2007ರಲ್ಲಿ ಮತ್ತೆ ಅಖಾಡಕ್ಕೆ ಇಳಿದ ಅವರು ಶಿರಸಿ ನಗರಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಬಾನಗೇಡಿ ಮಾಡಿದರು. 2008ರಲ್ಲಿ ಸುಮ್ಮನಿದ್ದ ಅವರು 2009ರಲ್ಲಿ ಮತ್ತೆರಡು ಅಪರಾಧ ಕೃತ್ಯದಲ್ಲಿ ಭಾಗಿಯಾದರು. 2011, 2013 ಹಾಗೂ 2025ರಲ್ಲಿಯೂ ಪಯ್ಯು ಚೌಟಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅದಾಗಿ ಆರು ವರ್ಷಗಳ ಕಾಲ ಪಯ್ಯು ಚೌಟಿ ಅವರು ಯಾವುದೇ ಅಪರಾಧ ಪ್ರಕರಣದಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರೆ, 2023ರಲ್ಲಿ ಅವರು ದಾವಣಗೆರೆಗೆ ಹೋಗಿದ್ದು ಅಲ್ಲಿ ಒಂದು ಪ್ರಕರಣದಲ್ಲಿ ಸಿಕ್ಕಿಬಿದ್ದರು. ದಾವಣಗೆರೆಯ ನ್ಯಾಮತಿಯಲ್ಲಿ ಹಂದಿಅಣ್ಣಿ ಎಂಬಾತರನ್ನು ಕೊಲೆ ನಡೆದಿದ್ದು, ಆ ಕೊಲೆ ಮಾಡಿ ಜೈಲು ಸೇರಿ ಜಾಮೀನಿನ ಮೇಲೆ ಬಂದಿದ್ದ ಆಂಜಿನೇಯ ಅವರ ಕೊಲೆಯಲ್ಲಿ ಪಯ್ಯು ಚೌಟಿ ಅವರ ಕೈವಾಡವಿದ್ಧ ಬಗ್ಗೆ ಆರೋಪಿಸಲಾಗಿತ್ತು. ಆ ಪ್ರಕರಣದಲ್ಲಿ ಗಾಯಗೊಂಡ ಮಧುಕರ ಎಂಬಾತರ ಮೇಲೆ ಲಾಂಗ್ ಬೀಸಿದ ಕೇಸಿನಡಿ ಪಯ್ಯು ಚೌಟಿ ಅವರ ಮೇಲೆ ಅಲ್ಲಿನ ಪೊಲೀಸರು ಕೇಸು ಹಾಕಿದ್ದರು.
ಅದಾದ ನಂತರ 2024 ಹಾಗೂ 2026ರಲ್ಲಿ ಮತ್ತೆ ಶಿರಸಿಯಲ್ಲಿಯೇ ಪಯ್ಯು ಚೌಟಿ ಅವರ ವಿರುದ್ಧ ಎರಡು ಕೇಸು ದಾಖಲಾಗಿದ್ದವು. ಈ ಎಲ್ಲಾ ಹಿನ್ನಲೆ ಕೊಲೆ ಯತ್ನ, ಹಲ್ಲೆ, ದೊಂಬಿ, ಜೀವ ಬೆದರಿಕೆ, ಕಳ್ಳತನ, ಕಿರುಕುಳ, ವಂಚನೆ ಸೇರಿ ಹಲವು ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದರು. ಅದಾಗಿಯೂ, ಪಯ್ಯು ಚೌಟಿ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅನೇಕ ಸನ್ಮಾನಗಳನ್ನು ಪಡೆದಿದ್ದರು. ಹಬ್ಬ-ಹರಿದಿನಗಳಲ್ಲಿ ದಾನ-ಧರ್ಮ, ಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ ಸೇರಿ ಅನೇಕ ಬಗೆಯ ಚಟುವಟಿಕೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ತೀರಾ ಈಚೆಗಂತೂ ಪಯ್ಯು ಚೌಟಿ ಅವರ ಅಪರಾಧ ಹಿನ್ನಲೆಯನ್ನು ಬಹುತೇಕರು ಮರೆತಿದ್ದು, ಅವರನ್ನು ಸಾಮಾಜಿಕ ಕಾರ್ಯಕರ್ತ ಎಂದೇ ಜನ ಗುರುತಿಸುತ್ತಿದ್ದರು. ಆದರೆ, ಪೊಲೀಸ್ ರೆಕಾರ್ಡಿನಲ್ಲಿ ಮಾತ್ರ ಅವರ 19 ಕೇಸುಗಳು ದಾಖಲೆಯಾಗಿಯೇ ಉಳಿದಿದ್ದವು.
ಪಯ್ಯು ಚೌಟಿ ಅವರ ವರ್ತನೆಯಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವ ಸಾಧ್ಯತೆ ಹಿನ್ನಲೆ ಜುಲೈ 3ರಂದೇ ಅವರ ಬಂಧನಕ್ಕಾಗಿ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದರು. ಆ ವರದಿ ಗಮನಿಸಿದ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಕೆಲ ದಿನದ ಹಿಂದೆ ಬಂಧನಕ್ಕೆ ಆದೇಶಹೊರಡಿಸಿದರು. ಅದರಂತೆ, ಸೆ 11ರಂದು ಶಿರಸಿ ಮಾರುಕಟ್ಟೆ ಪೊಲೀಸರು ಪಯ್ಯು ಚೌಟಿ ಅವರನ್ನು ದಿಢೀರ್ ಆಗಿ ಬಂಧಿಸಿ, ಬಳ್ಳಾರಿ ಜೈಲಿಗೆ ಕಳುಹಿಸಿದರು. ಪಯ್ಯು ಚೌಟಿ ಅವರ ಅಪರಾಧ ಹಿನ್ನಲೆ ಬಗ್ಗೆ ಅರಿವಿಲ್ಲದವರು ಪೊಲೀಸ್ ಠಾಣೆ ಎದುರು ಜಮಾಯಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಹಿಂದಿನ ಅಪರಾಧ ಪ್ರಕರಣಗಳ ವಿವರ ಹಾಗೂ ಮೇಲಧಿಕಾರಿಗಳ ಆದೇಶದ ಬಗ್ಗೆ ಪೊಲೀಸರು ಅವರಿಗೆ ಮನವರಿಕೆ ಮಾಡಿಕೊಟ್ಟರು. ಸದ್ಯ ಮುಂದಿನ ಆದೇಶದವರೆಗೂ ಪಯ್ಯು ಚೌಟಿ ಅವರು ಬಳ್ಳಾರಿ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.