ತಡಸದಿಂದ ಕಾರವಾರದ ಕೈಗಾಗೆ ನಿಯಮಬಾಹಿರವಾಗಿ ಅತಿ ಬಾರ ಹೊತ್ತ ಲಾರಿ ಸಂಚಾರ ನಡೆದಿದ್ದು, ಇದನ್ನು ತಡೆಯಲು ಪ್ರಯತ್ನಿಸಿದವರ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಾಗಿದೆ. ಲಾರಿಯ ಸಾಮರ್ಥ್ಯಕ್ಕಿಂತಲೂ ಅಧಿಕ ಬಾರ ಹೊತ್ತು ಹೊರಭಾಗದ ಲಾರಿಯವರು ರಸ್ತೆಗಿಳಿದ ಬಗ್ಗೆ ಫೋಟೋ-ಮಾಹಿತಿ-ದಾಖಲೆ ಸಂಗ್ರಹಿಸಿ ದೂರು ನೀಡಿದವರ ವಿರುದ್ಧವೇ ಪೊಲೀಸರು ದೂರು ದಾಖಲಿಸಿದ್ದಾರೆ.
ಅಕ್ಟೊಬರ್ 29ರ ರಾತ್ರಿ 18 ಟನ್ ಸಾಮರ್ಥ್ಯದ ಲಾರಿಯಲ್ಲಿ 28 ಟನ್ ಕಲ್ಲುಗಳನ್ನು ತುಂಬಲಾಗಿತ್ತು. ಆ ಲಾರಿ ಕಲಘಟಕಿ-ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ಕೈಗಾ ಕಡೆ ಸಂಚರಿಸುತ್ತಿತ್ತು. ಅಪಾಯಕಾರಿ ರೀತಿ ಸಂಚರಿಸುತ್ತಿದ್ದ ಲಾರಿ ನೋಡಿದ ಲಾರಿ ಮಾಲಕರ ಸಂಘದವರು ಅದನ್ನು ತಡೆದಿದ್ದರು. ಲಾರಿಯ ಕಾಗದಪತ್ರಗಳ ತಪಾಸಣೆ ಮಾಡಿದಾಗ ಅಧಿಕ ಬಾರ ಹೊತ್ತಿರುವುದನ್ನು ಗಮನಿಸಿದ್ದರು. ಕೂಡಲೇ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳಿಗೆ ಲಾರಿಯ ಮಾಹಿತಿ ಹಾಗೂ ದಾಖಲೆಗಳನ್ನು ವಾಟ್ಸಪ್ ಮಾಡಿದ್ದರು. ಜೊತೆಗೆ ಅಧಿಕ ಬಾರ ಹೊತ್ತ ಲಾರಿಯ ಸಂಚಾರ ತಡೆಯುವಂತೆ ಒತ್ತಾಯಿಸಿದ್ದರು.
ಅಕ್ಟೊಬರ್ 30ರ ನಸುಕಿನಲ್ಲಿ ಅಂಕೋಲಾದ ಹೆಬ್ಬುಳದ ಬಳಿ ಲಾರಿ ಮಾಲಕರ ಸಂಘದವರು ಲಾರಿಯ ದಾಖಲೆ ತಪಾಸಣೆ ನಡೆಸಿದ್ದು, ಆ ವೇಳೆ ನಕಲಿ ದಾಖಲೆಗಳು ಸಹ ಇದ್ದವು. ಒಂದೇ ಲಾರಿಗೆ ಒಂದೇ ದಿನ ಎರಡು ಪಾಸುಗಳ ಮೂಲಕ ಕಲ್ಲು ಸಾಕಾಣಿಗೆ ನಡೆಸಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಸರ್ಕಾರಕ್ಕೆ ರಾಜಧನ ವಂಚನೆ ಆಗುತ್ತಿರುವ ಬಗ್ಗೆಯೂ ಲಾರಿ ಮಾಲಕರ ಸಂಘದವರು ದೂರಿದ್ದರು. ಸಾಕ್ಷಿಗಾಗಿ ಆ ದಾಖಲೆಗಳ ಫೋಟೋ ತೆಗೆದು ಅಧಿಕಾರಿಗಳಿಗೆ ರವಾನಿಸಿದ್ದರು.
ಆದರೆ, ನಿಯಮಬಾಹಿರವಾಗಿ ರಸ್ತೆಗಿಳಿದಿದ್ದ ಲಾರಿ ಸಂಚಾರ ತಡೆದ ಕಾರಣ ಆ ಲಾರಿಯವರು ಸಿಟ್ಟಾಗಿದ್ದರು. ಲಾರಿ ತಡೆದು ದೂರು ನೀಡಿದವರ ವಿರುದ್ಧ ಅವರು ದೂರು ನೀಡಲು ನಿರ್ಧರಿಸಿದ್ದು, ಅಂಕೋಲಾದ ಗೋಪೇಶ್, ಸರ್ವೇಶ್, ಆದಿತ್ಯ, ಸುಮೀತ, ರಫಿಕ್, ವಿಶ್ವಜಿತ್ ಹಾಗೂ ಸುಜಯ್ ಎಂಬಾತರ ವಿರುದ್ಧ ದೂರು ನೀಡಿದರು. ಕ್ರೆಟಾ ಕಾರಿನಲ್ಲಿ ಬಂದ ಐವರು ವಿಶ್ವಜಿತ್ ಹಾಗೂ ಸುಜಯ್ ಅವರ ಸೂಚನೆ ಮೇರೆಗೆ ಲಾರಿಯಲ್ಲಿದ್ದ ಶಿವರಾಜ ಶಿವಲಿಂಗಪ್ಪ ಅವರನ್ನು ಅಡ್ಡಗಟ್ಟಿದ ಬಗ್ಗೆ ಲಾರಿ ಚಾಲಕ ಅರ್ಜುನ ಹರಗೇರಿ ಅವರು ದೂರಿದರು.
ಈ ಹಿನ್ನಲೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. `ಕೈಗಾದಲ್ಲಿ ಶೇ 80ರಷ್ಟು ಕಾಮಗಾರಿ ಸ್ಥಳೀಯರಿಗೆ ಕೊಡಬೇಕು ಎಂದು ಆಗ್ರಹಿಸಿದ್ದೇವು. ಅದು ಜಾರಿ ಆಗಿಲ್ಲ. ಜೊತೆಗೆ ಅಕ್ರಮ ನಡೆಸುವವರನ್ನು ಬಿಟ್ಟು ಅದನ್ನು ತಡೆಯಲು ಹೋದವರ ವಿರುದ್ಧ ಕೇಸು ಹಾಕಲಾಗಿದೆ’ ಎಂದು ಲಾರಿ ಮಾಲಕರ ಸಂಘದವರು ಆಕ್ಷೇಪಿಸಿದರು. `ಶ್ಯಾಮ್ ಎಂಟರಪೈಸಸ್ ಎಂಬ ಹೆಸರಿನ ಅಡಿ ಒಂದೇ ಲಾರಿಗೆ ಎರಡೆರಡು ತೂಕದ ಮಾಪನ ರಸೀದಿ ನೀಡಲಾಗಿದೆ. ಎರಡು ರಸೀದಿಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಈ ಬಗ್ಗೆ ವಿವಿಧ ಇಲಾಖೆಗೆ ದೂರು ನೀಡಿದರೂ ಕ್ರಮವಾಗಿಲ್ಲ. ಓವರ್ ಲೋಡ್ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ನಮ್ಮ ವಿರುದ್ಧ ಕೇಸು ಹಾಕಲಾಗಿದೆ’ ಎಂದು ಲಾರಿ ಮಾಲಕ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.