ಗೋಕರ್ಣದಲ್ಲಿ ಜಲ ಸಾಹಸ ಚಟುವಟಿಕೆ ನಡೆಸುತ್ತಿದ್ದ ಚಂದ್ರಕಾoತ ಲಕ್ಕುಮನೆ ಅವರ ಉದ್ದಿಮೆ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ಅವರ ಉದ್ದಿಮೆ ನಷ್ಟ ಮಾಡಲು ಸಂಚು ರೂಪಿಸಿದ ಕಿಡಿಗೇಟಿಗಳು ಅವರ ಬಳಿಯಿದ್ದ ಬೋಟುಗಳನ್ನು ಧ್ವಂಸ ಮಾಡಿದ್ದಾರೆ.
ಕುಮಟಾ ಅಘನಾಶಿನಿಯಲ್ಲಿ ಚಂದ್ರಕಾAತ ಗೋವಿಂದ ಲಕ್ಕುಮನೆ ಅವರು ವಾಸವಾಗಿದ್ದಾರೆ. ಜಲಸಾಹಸ ಕ್ರೀಡಾ ಚಟುವಟಿಕೆ ನಡೆಸಿ ಅವರು ಜೀವನ ನಡೆಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪಡೆದು ಅವರು ಈ ಚಟುವಟಿಕೆ ಮಾಡುತ್ತಿದ್ದಾರೆ. ಗೋಕರ್ಣದ ಹಾಪ್ಮೂನ್ ಬೀಚ್ ಬಳಿ ಅವರು ಬನಾನಾ ಬೋಟ್, ಬಂಪರ್ ಬೋಟ್ ಚಟುವಟಿಕೆಗಳನ್ನು ನಡೆಸುತ್ತಾರೆ. ಪ್ರವಾಸಿಗರನ್ನು ಆಕರ್ಷಿಸಿ ಅವರಿಗೆ ಪ್ರವಾಸೋದ್ಯಮದ ಅನುಭೂತಿ ಕಲ್ಪಿಸುತ್ತಾರೆ. ಇದಕ್ಕಾಗಿ ಅವರು ಸೇವಾ ಶುಲ್ಕವನ್ನು ಸಹ ಪಡೆಯುತ್ತಿದ್ದು, ಉತ್ತಮ ಆದಾಯಗಳಿಸುತ್ತಿದ್ದಾರೆ.
ಆದರೆ, ಚಂದ್ರಕಾoತ ಲಕ್ಕುಮನೆ ಅವರ ಉದ್ದಿಮೆ ಬಗ್ಗೆ ಕೆಲವರಿಗೆ ಅಸೂಯೆ ಶುರುವಾಗಿದೆ. ಅವರ ಉದ್ದಿಮೆ ಹಾಳು ಮಾಡಬೇಕು ಎಂದು ಯೋಚಿಸಿದ ಕಿಡಿಗೇಡಿಗಳು ಬೋಟನ್ನು ಧ್ವಂಸ ಮಾಡಲು ಉದ್ದೇಶಿಸಿದ್ದಾರೆ. ಅಕ್ಟೊಬರ್ 11ರಂದು ಹಾಪ್ಮೂನ್ ಬೀಚ್ ದಡದಲ್ಲಿ ನಿಲ್ಲಿಸಿದ್ದ ಬೋಟುಗಳಿಗೆ ದುಷ್ಟರು ಚಾಕು ಚುಚ್ಚಿದ್ದಾರೆ. ಅಕ್ಟೊಬರ್ 12ರಂದು ಚಂದ್ರಕಾoತ ಲಕ್ಕುಮನೆ ಅವರಿಗೆ ಈ ವಿಷಯ ಗೊತ್ತಾಗಿದೆ. ಆದರೆ, ಈ ಕೃತ್ಯ ಮಾಡಿದವರು ಯಾರು? ಎಂದು ಅರಿವಿಗೆ ಬಂದಿಲ್ಲ.
1.80 ಲಕ್ಷ ರೂ ನಷ್ಟ ಅನುಭವಿಸಿದ ಚಂದ್ರಕಾoತ ಲಕ್ಕುಮನೆ ಅವರು ದುಷ್ಟರನ್ನು ಕಂಡು ಹಿಡಿಯುವುದಕ್ಕಾಗಿ ಪೊಲೀಸರ ಸಹಾಯ ಕೇಳಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.