ಕಳ್ಳತನವನ್ನೇ ಕಾಯಕವನ್ನಾಗಿಸಿಕೊಂಡಿದ್ದ ಮುರುಡೇಶ್ವರದ ಹನುಮಂತ ಕೋಂಚಿಕೋರವರ್ ಅವರನ್ನು ಶಿರಸಿ ಪೊಲೀಸರು ಹಿಡಿದಿದ್ದಾರೆ. ಬಸವೇಶ್ವರ ನಗರದ ಕಾಶೀಂ ಸಾಬ್ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ ಕಾರಣ ಹನುಮಂತ ಕೋಂಚಿಕೊರವರ್ ಅವರು ಸಿಕ್ಕಿಬಿದ್ದಿದ್ದಾರೆ.
ಶಿರಸಿಯ ಹುಬ್ಬಳ್ಳಿ ರಸ್ತೆಯ ಬಸವೇಶ್ವರ ನಗರದಲ್ಲಿರುವ ಕಾಶೀಂ ಅಬ್ದುಲ್ ಮಹಾಬ್ ಶೇಖ್ ಅವರ ಮನೆಯಲ್ಲಿ ಜನವರಿ 22ರ ಅವಧಿಯಲ್ಲಿ ಕಳ್ಳತನ ನಡೆದಿತ್ತು. ಕಾಶೀಂ ಸಾಬ್ ಅವರು ಮನೆಯಲ್ಲಿ ಇಲ್ಲದ ವಿಷಯ ಅರಿತು ಮನೆಗೆ ನುಗ್ಗಿದ್ದ ಹನುಮಂತ ಕೋಂಚಿಕೋರವರ್ ಅವರು ಅಲ್ಲಿದ್ದ 1.20 ಲಕ್ಷ ರೂ ಹಣ ಕದ್ದು ಪರಾರಿಯಾಗಿದ್ದರು. ಬಾತ್ ರೂಮಿನ ಹಂಚು ತೆಗೆದು ಒಳ ನುಗ್ಗಿದ ಅವರಿಗೆ 10 ಗ್ರಾಂ ಚಿನ್ನದ ಸರವೂ ಸಿಕ್ಕಿತ್ತು. ಜನವರಿ 27ರಂದು ಮನೆಗೆ ಬಂದ ಕಾಶೀಂ ಸಾಬ್ ಅವರಿಗೆ ಮನೆಯೊಳಗಿನ ಸಾಮಗ್ರಿ ಚಲ್ಲಾಪಿಲ್ಲಿಯಾಗಿರುವುದು ಗೊತ್ತಾಯಿತು. ಶೋಧ ನಡೆಸಿದಾಗ ಬಾತ್ ರೂಮಿನ ಹಂಚು ಹಾರಿರುವುದು ಅರಿವಿಗೆ ಬಂದಿತು. ಮನೆ ಪೂರ್ತಿ ಹುಡುಕಾಟ ನಡೆಸಿದಾಗ 1.20 ಲಕ್ಷ ರೂ ಹಣ ಹಾಗೂ 60 ಸಾವಿರ ರೂ ಮೌಲ್ಯದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿತು.
ಕಾಶೀo ಸಾಬ್ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ವಿಶೇಷ ತಂಡ ರಚಿಸಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ್ ಅವರಿಗೆ ಪ್ರಕರಣದ ಜವಾಬ್ದಾರಿ ನೀಡಿದರು. ಪಿಐ ಸಂಪತ್ ಸಿ, ಪಿಸೈ ಬಸವರಾಜ ಕನಶೆಟ್ಟಿ, ಗೀತಾ ಪಾಟೀಲ್ ಅವರ ಜೊತೆ ಪೊಲೀಸ್ ಸಿಬ್ಬಂದಿ ಕೋಟೇಶ್ವರ ನಾಗರವಳ್ಳಿ, ಮಂಜುನಾಥ ರೆಡ್ಡಿ, ಸಂದೀಪ ನಿಂಬಾಯಿ, ರಾಕೇಶ ಎನ್ ಎಚ್, ಅಶೋಕ ಹರಿಕಂತ್ರ, ಮುರುಡೇಶ್ವರ ಠಾಣಾ ಸಿಬ್ಬಂದಿ ಮಂಜುನಾಥ ಸೇರಿ ಹನುಮಂತ ಕೋಂಚಿಕೋರವರ್ ಅವರನ್ನು ಬಂಧಿಸಿದರು.
ಈ ವೇಳೆ ಹನುಮಂತ ಕೋಂಚಿಕೋರವರ್ ಮುರುಡೇಶ್ವರದಲ್ಲಿ ವಾಸವಾಗಿದ್ದು, ಅವರ ಮೂಲ ಊರು ಗದಗದ ಲಕ್ಷಿಶ್ವರ ಎಂದು ಗೊತ್ತಾಗಿದೆ. ಗದಗ, ಧಾರವಾಡ, ಉಡುಪಿ, ದಾವಣಗೆರೆ, ಹೊಸನಗರ, ಸಾಗರ ಸೇರಿ ಅನೇಕ ಕಡೆ ಹನುಮಂತ ಕೋಂಚಿಕೋರವರ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ತಿಳಿದಿದೆ.