ಜಿಲ್ಲಾ ಪಂಚಾಯತ ವಿಭಾಗೀಯ ಕಚೇರಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಮಲ್ಲಿಕಾರ್ಜುನ ಪಾಟೀಲ್ ಅವರು 10 ಸಾವಿರ ರೂಪಾಯಿಗೆ ಮಾರಾಟವಾಗಿದ್ದಾರೆ. ಮುಂಡಗೋಡು ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಅವರ ಬಳಿ ಲಂಚಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಶಿರಸಿ ಜಿಲ್ಲಾ ಪಂಚಾಯತ ವಿಭಾಗೀಯ ಕಚೇರಿಯಲ್ಲಿ ಮಲ್ಲಿಕಾರ್ಜುನ ಪಾಟೀಲ್ ಅವರು ಕೆಲಸ ಮಾಡುತ್ತಿದ್ದರು. ಲೆಕ್ಕಪರಿಶೋಧಕರಾಗಿದ್ದ ಮಲ್ಲಿಕಾರ್ಜುನ್ ಪಾಟೀಲ್ ಅವರು ಕಚೇರಿಗೆ ಬರುವ ಎಲ್ಲರ ಬಳಿಯೂ ಕೈ ಒಡ್ಡುತ್ತಿದ್ದರು. ದುಡ್ಡು ಕೊಟ್ಟರೂ ಸಹ ಅವರು ಅನೇಕರ ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದರು. ಮುಂಡಗೋಡಿನ ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಅವರಿಗೆ ಜಿಲ್ಲಾ ಪಂಚಾಯತ ಕಚೇರಿಯಿಂದ ಕೆಲಸವಾಗಬೇಕಿದ್ದು, ಆ ಬಿಲ್ ಪಾಸ್ ಮಾಡಲು ಮಲ್ಲಿಕಾರ್ಜುನ ಪಾಟೀಲ್ ಅವರು ಲಂಚ ಬಯಸಿದ್ದರು. `10 ಸಾವಿರಕ್ಕೆ 1 ರೂ ಕಡಿಮೆಯಿದ್ದರೂ ಬಿಲ್ ಪಾಸ್ ಮಾಡಲ್ಲ’ ಎಂದು ಹೇಳಿದ್ದರು.
ಇದರಿಂದ ಸಿಟ್ಟಾದ ನಾಗರಾಜ ಕಟ್ಟಿಮನೆ ಅವರು ಲೋಕಾಯುಕ್ತರ ಮೊರೆ ಹೋದರು. ರಹಸ್ಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು ಬುಧವಾರ ಲಂಚ ಸ್ವೀಕರಿಸುವ ಅವಧಿಯಲ್ಲಿಯೇ ದಾಳಿ ಮಾಡಿದರು. 10 ಸಾವಿರ ರೂ ಲಂಚದ ಹಣದ ಜೊತೆ ಮಲ್ಲಿಕಾರ್ಜುನ ಪಾಟೀಲ್ ಅವರು ಸಿಕ್ಕಿಬಿದ್ದರು. ಡಿಎಸ್ಪಿ ಧನ್ಯಾ ನಾಯಕ್, ಸಿಪಿಐ ರವಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಭ್ರಷ್ಟ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತರು ಜೈಲಿಗೆ ಕಳುಹಿಸಿದರು.
ಮಲ್ಲಿಕಾರ್ಜುನ್ ಪಾಟೀಲ್ ವಿರುದ್ಧ ಗುತ್ತಿಗೆದಾರರು ಅಸಮಧಾನ ವ್ಯಕ್ತಪಡಿಸಿದ್ದು, ಅನೇಕರು ಅವರ ಭ್ರಷ್ಟಾಚಾರದ ಬಗ್ಗೆ ದೂರಿದರು. ಕಳೆದ ಕೆಲವು ದಿನಗಳ ಹಿಂದೆ ಗುತ್ತಿಗೆ ಹಣ ನೀಡದ ಕಾರಣ ನ್ಯಾಯಾಲಯದಿಂದ ಜಿಪಂ ಕಚೇರಿಯ ಜಪ್ತಿ ಆದೇಶವಾಗಿತ್ತು. ಒಂದು ವರ್ಷದ ಹಿಂದೆ ಇದೇ ವಿಭಾಗೀಯ ಕಚೇರಿಯ ಇನ್ನಿತರ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿತ್ತು.