ಆನಗೋಡು ಗ್ರಾ ಪಂ ಮಾಜಿ ಸದಸ್ಯರಾದ ನರಸಿಂಹ ಬೋಳಪಾಲು ಅವರ ಜೊತೆ ಕೆ ಟಿ ಹೆಗಡೆ ಸೇರಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಭೇಟಿ ಮಾಡಿದ್ದಾರೆ. ಯಲ್ಲಾಪುರ ಪಟ್ಟಣದ ಅಂಚಿನಲ್ಲಿ ನಿರ್ಮಿಸಲು ಉದ್ದೇಶಿಸಿದ `ರಿಂಗ್ ರೋಡ್’ಗೆ ಅವರೆಲ್ಲರೂ ವಿರೋಧವ್ಯಕ್ತಪಡಿಸಿದ್ದಾರೆ.
ಯಲ್ಲಾಪುರದ ಆನಗೋಡು, ಬಾಳಗಿಮನೆ, ಶೀಗೇಪಾಲ್, ತಟಗಾರ ಹಾಗೂ ಶಿಸ್ತಮುಡಿ ಗ್ರಾಮಸ್ಥರ ಪರವಾಗಿ ಆರ್ ಎಸ್ ಭಾಗ್ವತ ಶೀಗೇಪಾಲ್, ಕೃಷ್ಣ ಭಟ್ಟ ಬದ್ನೇಪಾಲ್, ಮಂಜುನಾಥ ಭಟ್ಟ ಕೊಂಬೆಪಾಲ್, ಎನ್ ಕೆ ಭಟ್ಟ ಶೀಗೇಪಾಲ್, ಮಂಜುನಾಥ ಗಾಂವ್ಕರ್ ಹರಕನಪಾಲ್, ನಾರಾಯಣ ಭಟ್ಟ ಮೋಳೆಮನೆ ಇತರರು ಅವರು ಶಾಸಕರಲ್ಲಿ ಮನವಿ ಸಲ್ಲಿಸಿದ್ದಾರೆ. `ಯಲ್ಲಾಪುರ ಪಟ್ಟಣಕ್ಕೆ ಸುತ್ತುವರೆದು ರಿಂಗ್ ರೋಡ್ ನಿರ್ಮಿಸಲು ಸರ್ಕಾರ ಆಸಕ್ತವಾಗಿದ್ದು, ಅದರಿಂದ ಯಾವ ಪ್ರಯೋಜನವೂ ಇಲ್ಲ. ಈಗಿರುವ ಹೆದ್ದಾರಿ ಅಭಿವೃದ್ಧಿ ಮಾಡುವುದು ಅಗತ್ಯವಾಗಿದ್ದು, ಯಲ್ಲಾಪುರಕ್ಕೆ ವರ್ತುಲ ರಸ್ತೆ ಅಗತ್ಯವಿಲ್ಲ’ ಎಂದವರು ಪ್ರತಿಪಾದಿಸಿದ್ದಾರೆ. `ಕಾರವಾರ ಹುಬ್ಬಳ್ಲಿ ಮುಖ್ಯ ರಸ್ತೆಯಿಂದ ಉದ್ಯಮ ನಗರ-ನಿಸರ್ಗಮನೆ ಮಾರ್ಗವಾಗಿ ಬಿಸಗೋಡು ರಸ್ತೆಗೆ ಪರ್ಯಾಯ ಮಾರ್ಗವಿದೆ. ಅಲ್ಲಿಂದ ಕಣ್ಣಿಗೇರಿ ಮೂಲಕ ಹುಬ್ಬಳ್ಳಿಗೆ ಹೋಗುವ ಅವಕಾಶವಿದೆ. ಅದರೊಂದಿಗೆ ಕಾರವಾರ-ಹುಬ್ಬಳ್ಳಿ ಮಾರ್ಗವಾಗಿ ಮಾಗೋಡು ರಸ್ತೆ ಮೂಲಕ ಉಪಳೇಶ್ವರದ ಹುತ್ಕಂಡ, ಪಟ್ಟಿಗದ್ದೆ ಮೂಲಕ ಲಿಂಗ್ಯನಕೊಪ್ಪ-ರಾಮನಕೊಪ್ಪದಿoದಲೂ ಹುಬ್ಬಳ್ಳಿಗೆ ಹೋಗುವ ದಾರಿಯಿದೆ. ಹೀಗಿರುವಾಗ ಮತ್ತೊಂದು ರಿಂಗ್ ರೋಡ್ ಮಾಡುವ ಅವಶ್ಯಕತೆ ಇಲ್ಲ’ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: ಹಳ್ಳಿ ಹಳ್ಳಿಗೂ ಡಬಲ್ ರೋಡ್!
`ಸರ್ಕಾರ ಉದ್ದೇಶಿಸಿದ ರಿಂಗ್ ರೋಡ್ ನಿರ್ಮಾಣದಿಂದ ನೇಕರು ಮನೆ-ಭೂಮಿ ಕಳೆದುಕೊಳ್ಳಲಿದ್ದಾರೆ. ಈಗಿರುವ ಮಾರ್ಗವನ್ನೇ ಅಭಿವೃದ್ಧಿ ಮಾಡಿದರೆ ಅದರಿಂದ ಯಾರಿಗೂ ಸಮಸ್ಯೆ ಇಲ್ಲ. ಅದಕ್ಕೆ ತಕರಾರು ಸಹ ಬರುವುದಿಲ್ಲ.ಆದರೆ, ಯಲ್ಲಾಪುರ ಪಟ್ಟಣ ಸುತ್ತುವರೆದು ಹೊಸ ಮಾರ್ಗ ನಿರ್ಮಾಣ ಮಾಡಿದಲ್ಲಿ ಅದರಿಂದ ಸಾಕಷ್ಟು ಜನರಿಗೆ ಸಮಸ್ಯೆ ಆಗಲಿದೆ’ ಎಂದು ವಿವರಿಸಿದ್ದಾರೆ. `ಸರ್ಕಾರ ಆಸಕ್ತಿವಹಿಸಿದ ಮಾರ್ಗದಲ್ಲಿ ವರ್ತುಲ ರಸ್ತೆ ನಿರ್ಮಿಸಿದರೆ ಅನೇಕರ ಸೊಪ್ಪಿನ ಬೆಟ್ಟ ಹಾಳಾಗಲಿದೆ. ನೀರಿನ ಕಾಲುವೆ ಹಾಗೂ ಕೃಷಿ ಜಮೀನುಗಳಿಗೆ ಧಕ್ಕೆ ಆಗಲಿದೆ. ಪ್ರಸ್ತಾಪಿತ ಪ್ರದೇಶ ಗುಡ್ಡಗಾಡುಗಳಿಂದ ಕೂಡಿದ ಸೂಕ್ಷ ಪರಿಸರಹೊಂದಿದ್ದು, ಆ ಪರಿಸರಕ್ಕೂ ಅಪಾರ ಹಾನಿ ಆಗಲಿದೆ’ ಎಂದು ವಿವರಿಸಿದ್ದಾರೆ.