ಮುರುಡೇಶ್ವರ ಬಸ್ತಿಮಕ್ಕಿಯ ಶಬ್ಬೀರ ಹಾಗೂ ಮಹಮದ್ ಸೇರಿ ಹೊನ್ನಾವರ ಗುಣವಂತೆ ಬಳಿಯ ನರಸಿಂಹ ಗೌಡ ಅವರ ಹಸುಗಳನ್ನು ಕದ್ದಿದ್ದು, ಹಸುವನ್ನು ಕದ್ದ ಹಗ್ಗದ ಸಹಾಯದಿಂದ ಪೊಲೀಸರು ಕಳ್ಳರನ್ನು ಹುಡುಕಿದ್ದಾರೆ. ಹಸು ಕದ್ದ ಕಳ್ಳರಿನ್ನರನ್ನು ಪೊಲೀಸರು ಬಂಧಿಸಿದ್ದು, ಅವರ ಬಳಿಯಿದ್ದ ಕಾರನ್ನು ಜಪ್ತು ಮಾಡಿದ್ದಾರೆ.
ಹೊನ್ನಾವರದ ಗುಣವಂತೆಯ ಕೆರೆಮನೆಯಲ್ಲಿ ನರಸಿಂಹ ಗಣಪಯ್ಯ ಗೌಡ ಅವರು ವಾಸವಾಗಿದ್ದಾರೆ. ಕೃಷಿ ಜೊತೆ ಅವರು ಹೈನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದು, ನವೆಂಬರ್ 20ರಂದು ಬೆಳಗ್ಗೆ ಅವರು ಮೇವಿಗೆ ಬಿಟ್ಟ ಹಸು ಕಾಣೆಯಾಗಿದೆ. ಆ ದಿನ ಅವರ ಐದು ಹಸುಗಳು ಮೇವಿಗೆ ಹೋಗಿದ್ದು, ಸಂಜೆ ನಾಲ್ಕು ಹಸುಗಳು ಮಾತ್ರ ಕೊಟ್ಟಿಗೆಗೆ ಮರಳಿವೆ. ಎಲ್ಲಾ ಕಡೆ ಹುಡುಕಿದರೂ ಅವರ ಹಸು ಸಿಕ್ಕಿಲ್ಲ. ಹೀಗಾಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಹಸು ಕಾಣೆಯಾದ ಬಗ್ಗೆ ವಿವರಿಸಿ ಕೇಸು ದಾಖಲಿಸಿದ್ದಾರೆ.
ಮಂಕಿ ಪೊಲೀಸ್ ಠಾಣೆಯ ಪಿಸೈ ಕುಮಾರ ಕಾಂಬ್ಳೆ ಅವರು ಹಸು ಹುಡುಕಾಟ ಶುರು ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ರುದ್ರಯ್ಯ ಕಾಡದೇವರ, ಬಸವನಗೌಡ ಬೀರಾದರ್, ಸಂದೀಪ ಪಟಗಾರ ಅವರು ವಿಶೇಷ ತಂಡ ಕಟ್ಟಿಕೊಂಡು ಕಾಣೆಯಾದ ಹಸು ಹುಡುಕಾಟ ನಡೆಸಿದ್ದಾರೆ. ಆದರೆ, ಅವರಿಗೆ ಹಸು ಸಿಕ್ಕಿಲ್ಲ. ಆದರೆ, ಅನುಮಾನಾಸ್ಪದ ಕಾರಿನಲ್ಲಿ ಹಸುವಿಗೆ ಕಟ್ಟಿದ್ದ ಹಗ್ಗವೊಂದು ಕಾಣಿಸಿದೆ. ಹೀಗಾಗಿ ಮುರುಡೇಶ್ವರ ಬಸ್ತಿಮಕ್ಕಿಯ ಶಬ್ಬೀರ ಅಬ್ದುಲ್ ಶೇಖ್ ಹಾಗೂ ಮಹಮದ್ ಪರ್ವೇಜ್ @ ಅನೀಸ್ ಹಸನ್ ಸಾಹೇಬ್ ಅವರ ಮೇಲೆ ಅನುಮಾನ ಮೂಡಿದೆ.
ಮುರುಡೇಶ್ವರದ ಪಿಸೈ ಶ್ರೀಶೈಲ್ ಮರಗೋಡ, ಎಸೈ ವೆಂಕಟೇಶ ಪೂಜಾರಿ, ಪರಮೇಶ್ವರ ಮಾಳಸೇಕರ್ ಅವರ ಜೊತೆ ಮಂಕಿ ಪೊಲೀಸ್ ಠಾಣೆಯ ಅಣ್ಣಪ್ಪ ಕೋರಿ ಪ್ರಕರಣದಲ್ಲಿ ಆಸಕ್ತಿ ತೋರಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ, ಭಟ್ಕಳ ಉಪವಿಭಾಗದ ಡಿವೈಎಸ್ಪಿ ಗಿರೀಶ್ ಎಸ್ ವಿ. ಹಾಗೂ ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ ಹಂಚನಾಳ ಅವರಿಗೆ ತನಿಖಾ ತಂಡದವರು ಕಳ್ಳರ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಹಸು ಕಳ್ಳರಿಬ್ಬರನ್ನು ಬಂಧಿಸಿ, ಹಸು ಕದಿಯಲು ಬಳಸಿದ ಹಗ್ಗ ಹಾಗೂ ಕಾರನ್ನು ಜಪ್ತು ಮಾಡಿದ್ದಾರೆ.