ಉತ್ತರ ಕನ್ನಡದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಜನರ ಜೀವ ಹೋದರೂ ಅಕ್ರಮ ಮಾತ್ರ ನಿಲ್ಲುತ್ತಿಲ್ಲ. ಹೊನ್ನಾವರದಲ್ಲಿ ಶನಿವಾರ ರಾತ್ರಿ ಮರಳು ಸಾಗಿಸುವ ಟಿಪ್ಪರ್ ವೃದ್ಧೆಯೊಬ್ಬರಿಗೆ ಗುದ್ದಿದ್ದು, ವೃದ್ಧೆಯ ಸಾವಾಗಿದ್ದರೂ ಮರಳು ಮಾಫಿಯಾಗೆ ಕಡಿವಾಣ ಬಿದ್ದಿಲ್ಲ.
`ಅಕ್ರಮ ಮರಳು ಸಾಗಾಟ ಮಾಡುವ ಟಿಪ್ಪರಿನ ನೋಂದಣಿ ರದ್ಧು ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಹೇಳಿದ್ದಾರೆ. ಆದರೆ, ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಪರಿಣಾಮ ಅಧಿಕಾರಿಗಳ ಕಣ್ಣ ಎದುರಿನಲ್ಲಿಯೇ ಟಿಪ್ಪರ್ ಲಾರಿಗಳು ಸಂಚಾರ ನಡೆಸಿವೆ. ಮೊದಲಿಗಿಂತಲೂ ಹೆಚ್ಚಿನ ಹಣಪಡೆದು ಮರಳು ಮಾರಾಟ ನಡೆಯತ್ತಿದೆ. ಮರಳು ಲಾರಿಗಳ ಅಬ್ಬರಕ್ಕೆ ಜನರ ಜೀವ ಹೋದರೂ ಅದನ್ನು ಕೇಳುವವರಿಲ್ಲ.
ನವೆಂಬರ್ 28ರ ರಾತ್ರಿಯೂ ಗೇರುಸೊಪ್ಪದಿಂದ ಹೊನ್ನಾವರದ ಕಡೆ ಸಂಚರಿಸುತ್ತಿದ್ದ ಟಿಪ್ಪರ್ ಉಪ್ಪೋಣಿಯ ಮೆಹರುನಿಸಾ ಅಬು ಮಹಮದ್ ಗೈಮಾ ಎಂಬಾತರನ್ನು ಕೊಂದಿದೆ. ಸ್ಕೂಟಿಯ ಸಹಸವಾರರಾಗಿ ಸಂಚರಿಸುತ್ತಿದ್ದ ಅವರಿಗೆ ಟಿಪ್ಪರ್ ಗುದ್ದಿ ಪರಾರಿಯಾಗಿದ್ದು, ಆ ಟಿಪ್ಪರಿನಲ್ಲಿ ಮರಳಿದ್ದ ಕಾರಣ ಚಾಲಕ ವಾಹನ ನಿಲ್ಲಿಸಿಲ್ಲ. ರಾತ್ರಿ 8.15ಕ್ಕೆ ಈ ಅಪಘಾತ ನಡೆದಿದ್ದು, ರಸ್ತೆ ನಡುವೆ ಬಿದ್ದು ವೃದ್ಧೆ ಸಾವನಪ್ಪಿದ್ದಾರೆ. ಅಪಘಾತದ ನಂತರ ಒಮ್ಮೆ ಮಾತ್ರ ಟಿಪ್ಪರ್ ಚಾಲಕ ವಾಹನ ನಿಧಾನಗೊಳಿಸಿದ್ದು, ಅದಾದ ಕ್ಷಣಮಾತ್ರದಲ್ಲಿಯೇ ಇನ್ನಷ್ಟು ವೇಗವಾಗಿ ಟಿಪ್ಪರ್ಸಹಿತ ಅಲ್ಲಿಂದ ಪರಾರಿಯಾಗಿರುವ ಬಗ್ಗೆ ಮಾಹಿತಿಯಿದೆ.
ಸ್ಕೂಟಿಯಲ್ಲಿ ಹೋಗುವಾಗ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸಾವನಪ್ಪಿದ ಬಗ್ಗೆ ಉಪ್ಪೋಣಿ ಮುಸ್ಲಿಂ ಕೇರಿಯ ಮಹಮದ್ ಅಜ್ಮಲ್ ಅಬು ಮಹಮದ್ ಗೈಮಾ ಅವರು ಪೊಲೀಸ್ ದೂರು ನೀಡಿದ್ದಾರೆ. ಆ ದೂರಿನ ಅನ್ವಯ ಪೊಲೀಸರು ಟಿಪ್ಪರ್ ಹುಡುಕಾಟ ನಡೆಸಿದ್ದಾರೆ. ಪೊಲೀಸ್ ತನಿಖೆ ಸರಿಯಾಗಿ ನಡೆದಲ್ಲಿ ಟಿಪ್ಪರಿನಲ್ಲಿದ್ದ ಅಕ್ರಮ ಮರಳು ಸಾಗಾಟ ಪ್ರಕರಣವೂ ಹೊರಬರಲಿದೆ.