ಕಾರವಾರದಿಂದ ಭಟ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ 2013ರಲ್ಲಿ ಶುರುವಾಗಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಇನ್ನೂ ಅನೇಕ ಕಡೆ ಸೇತುವೆ, ಸರ್ವಿಸ್ ರಸ್ತೆ ಸೇರಿ ಅನೇಕ ಬಗೆಯ ಕೆಲಸಗಳು ಬಾಕಿಯಿವೆ. ಈ ಅರೆಬರೆ ಕಾಮಗಾರಿ ವಿರುದ್ಧ ಜನಶಕ್ತಿ ವೇದಿಕೆ ಅಸಮಧಾನವ್ಯಕ್ತಪಡಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
`ಕೆಲಸ ಮುಗಿಯದಿದ್ದರೂ ಎಂಟು ವರ್ಷಗಳಿಂದ ಟೋಲ್ ವಸೂಲಿ ನಡೆದಿದೆ. ಅಗತ್ಯ ಮೂಲಭೂತ ಸೌಕರ್ಯ ನೀಡದೇ ವಂಚಿಸಲಾಗುತ್ತಿದೆ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಈ ಹಿಂದೆ ಸ್ಥಳೀಯ ವಾಹನಗಳಿಗೆ ನೀಡಲಾಗಿದ್ದ ಟೋಲ್ ವಿನಾಯಿತಿ ಅಥವಾ ರಿಯಾಯಿತಿಯನ್ನು ಮುಂದುವರಿಸಲಾಗುತ್ತಿತ್ತು. ಶಾಲಾ ವಾಹನಗಳಿಗೂ ಟೋಲ್ ಗೇಟ್ಗಳಲ್ಲಿ ಶುಲ್ಕ ವಿಧಿಸುತ್ತಿರಲಿಲ್ಲ. ಆದರೆ ಇದೀಗ ಡಿಸೆಂಬರ್ 1ರಿಂದ ಸ್ಥಳೀಯ ವಾಹನಗಳಿಗೂ ಟೋಲ್ ಶುಲ್ಕ ವಸೂಲಿ ಮಾಡುವ ಮಾಹಿತಿ ಬಂದಿದ್ದು, ಅದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಡಿಸೆಂಬರ್ 1ರಿಂದ ಟೋಲ್ ಶುಲ್ಕ ವಸೂಲಿ ಮಾಡುವಂತೆ ಮೌಖಿಕ ಆದೇಶ ಬಂದಿದೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಈ ನಿರ್ಧಾರದಿಂದ ಸ್ಥಳೀಯ ಟೆಂಪೋ ಮಾಲೀಕರು, ಟ್ಯಾಕ್ಸಿ ಚಾಲಕರು, ಲಾರಿ ಮಾಲೀಕರು, ಶಾಲಾ ವಾಹನಗಳು ಸೇರಿದಂತೆ ಪ್ರತಿನಿತ್ಯ ಹೆದ್ದಾರಿಯನ್ನು ಅವಲಂಬಿಸಿರುವ ಸಾರ್ವಜನಿಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ’ ಎಂದು ಮಾಧವ ನಾಯಕ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
`ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪೂರ್ಣಗೊಳ್ಳದೆ, ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸದೆ ಮತ್ತೆ ಸ್ಥಳೀಯ ವಾಹನಗಳಿಂದಲೂ ಟೋಲ್ ವಸೂಲಿ ಮಾಡಲು ಮುಂದಾಗಿರುವುದು ಎಷ್ಟು ಸಮಂಜಸ? ಎಂದವರು ಪ್ರಶ್ನಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕಾಮಗಾರಿಗಳ ವಿಳಂಬವನ್ನು ಸಹಿಸಿಕೊಂಡು ಬಂದಿರುವ ಸ್ಥಳೀಯ ಜನರು ಮತ್ತೊಮ್ಮೆ ಹೆಚ್ಚುವರಿ ಆರ್ಥಿಕ ಹೊರೆ ಹೊರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಕಂಪನಿಯವರ ಜೊತೆ ಚರ್ಚೆ ನಡೆಸಬೇಕು. ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವವರೆಗೆ ಸ್ಥಳೀಯ ವಾಹನಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮುಂದುವರಿಸಬೇಕು’ ಎಂದವರು ಆಗ್ರಹಿಸಿದ್ದಾರೆ. `ಸ್ಥಳೀಯ ವಾಹನಗಳ ಮೇಲೆ ಮತ್ತೆ ಟೋಲ್ ಶುಲ್ಕ ವಿಧಿಸುವ ನಿರ್ಧಾರವನ್ನು ಜಾರಿಗೊಳಿಸಿದರೆ ಉತ್ತರ ಕನ್ನಡ ಜಿಲ್ಲೆಯ ಲಾರಿ ಮಾಲೀಕರು, ಟೆಂಪೋ ಮತ್ತು ಟ್ಯಾಕ್ಸಿ ಮಾಲೀಕರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದು ಅವರು ಎಚ್ಚರಿಸಿದ್ದಾರೆ.