ನದಿ ತಿರುವು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಾಂದೋಲನ ಜೋರಾಗಿದ್ದು, ಯಲ್ಲಾಪುರದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್ ಎಸ್ ಭಟ್ಟ ಅವರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. `ನವೆಂಬರ್ 3ರಂದು ಯಲ್ಲಾಪುರದಲ್ಲಿ ನಡೆಯುವ ಹೆದ್ದಾರಿ ತಡೆಗೆ ಹೆಚ್ಚಿನ ಸಂಖ್ಯೆಯ ಜನ ಬರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
`ಸರ್ಕಾರದ ಅನೇಕ ಯೋಜನೆಗಳಿಗೆ ಉತ್ತರ ಕನ್ನಡ ಜಿಲ್ಲೆ ತ್ಯಾಗ ಮಾಡಿದೆ. ಅದಾಗಿಯೂ, ಇಲ್ಲಿನ ನೆಲ-ಜಲದ ಮೇಲೆ ದಬ್ಬಾಳಿಕೆ ಮುಂದುವರೆದಿದೆ. ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆಡೆ ತಿರುಗಿಸುವುದು ಅಪಾಯಕಾರಿ. ಇದು ಅತ್ಯಂತ ವಿನಾಶಕಾರಿ ಯೋಜನೆಯಾಗಿದ್ದು, ಅದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು’ ಎಂದು ಆರ್ ಎಸ್ ಭಟ್ಟ ಅವರು ಹೇಳಿದ್ದಾರೆ.
`ಪರಿಸರ ಕಾಳಜಿಹೊಂದಿರುವ ಸೋಂದಾ ಸ್ವರ್ಣವಲ್ಲಿ ಶ್ರೀಗಳು ಈ ಯೋಜನೆ ವಿರುದ್ಧ ಹೋರಾಡುತ್ತಿದ್ದಾರೆ. ನಾವೆಲ್ಲರೂ ಅವರ ಬೆಂಬಲಕ್ಕಿದ್ದು, ಒಕ್ಕೂರಲಿನಿಂದ ಯೋಜನೆಯನ್ನು ವಿರೋಧಿಸಬೇಕಿದೆ. ಅವೈಜ್ಞಾನಿಕ ಯೋಜನೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಡೆಯಲಿದೆ’ ಎಂದವರು ಹೇಳಿದ್ದಾರೆ. `ಜಿಲ್ಲೆಯ ಜನರ ಹಿತಕ್ಕಾಗಿ ಪಿಎಲ್ಡಿ ಬ್ಯಾಂಕ್ ಹಾಗೂ ಸರ್ವ ಸದಸ್ಯರು ಬದ್ಧರಾಗಿದ್ದಾರೆ. ಬ್ಯಾಂಕಿನ ಕಡೆಯಿಂದಲೂ ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದವರು ಹೇಳಿದ್ದಾರೆ.