ಶಿರಸಿಯ ಶ್ರೀದೇವಿ ಶೆಟ್ಟಿ ಹಾಗೂ ಸುನೀಲ ಶೆಟ್ಟಿ ಅವರು ಹೊಸ ಮನೆ ಕಟ್ಟಿದ್ದು, ಮನೆಯ ಪೂರ್ತಿ ಕೆಲಸ ಮುಗಿದರೂ ಕಟ್ಟಡ ನಿರ್ಮಾಣ ಮಾಡಿದ ಮೌದೀನ್ ಸಾಬ್ ಅವರ ಹಣ ಪಾವತಿಸಿಲ್ಲ. ಹೀಗಾಗಿ 63 ಲಕ್ಷ ರೂ ವೆಚ್ಚ ಮಾಡಿ ಮನೆ ಮಾಡಿಕೊಟ್ಟ ಮೌದೀನ್ ಸಾಬ್ ಅವರಿಗೆ 22.4 ಲಕ್ಷ ರೂ ಮೋಸವಾಗಿದೆ.
ಶಿರಸಿಯ ಹುಬ್ಬಳ್ಳಿ ರಸ್ತೆಯ ಗೌಡಳ್ಳಿಯಲ್ಲಿ ಮೌದೀನ್ ಅನ್ವರ್ ಸಾಬ್ ಮುಲ್ಲಾ ಅವರು ವಾಸವಾಗಿದ್ದಾರೆ. ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದಾರೆ. ಶಿರಸಿ ನಗರದ ಕೆಳಗಿನ ಗುಡ್ಡದಮನೆ ಬಳಿ ಶ್ರೀದೇವಿ ಸುನೀಲ ಶೆಟ್ಟಿ ಹಾಗೂ ಸುನೀಲ ರಾಧಾಕೃಷ್ಣ ಶೆಟ್ಟಿ ಅವರ ಸೈಟ್ ಇದ್ದು, ಅಲ್ಲಿ ಮನೆ ಕಟ್ಟಿಕೊಡುವ ಹೊಣೆಯನ್ನು ಮೌದೀನ್ ಸಾಬ್ ಅವರು ವಹಿಸಿಕೊಂಡಿದ್ದಾರೆ. ಅದರಂತೆ, ಅವರ ನಡುವೆ ಮಾತುಕಥೆ ನಡೆದಿದ್ದು, ಪ್ರತಿ ಚದರ ಅಡಿಗೆ 2300ರೂ ದರದಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಶ್ರೀದೇವಿ ಶೆಟ್ಟಿ ಹಾಗೂ ಸುನೀಲ ಶೆಟ್ಟಿ ಅವರು ಹೇಳಿದ್ದಾರೆ. ಅದಕ್ಕೆ ಮೌದೀನ್ ಸಾಬ್ ಅವರು ಒಪ್ಪಿ ಕರಾರು ಪತ್ರ ಮಾಡಿಕೊಂಡಿದ್ದಾರೆ.
ಹೀಗಿರುವಾಗ, ಆ ಕರಾರು ಪತ್ರಕ್ಕೆ `ಪತ್ನಿಯ ಸಹಿ ಹಾಕಿಸಿಕೊಂಡು ಬರುವೆ’ ಎಂದು ಸುನೀಲ ಶೆಟ್ಟಿ ಅವರು ಹೇಳಿದ್ದು, ಮೌದೀನ್ ಸಾಬ್ ಅವರು ಆ ಪತ್ರ ನೀಡಿದ್ದಾರೆ. ಆದರೆ, ಸುನೀಲ ಶೆಟ್ಟಿ ಅವರು ಆ ಪತ್ರವನ್ನು ಮರಳಿಸಿಲ್ಲ. ಅದಾಗಿಯೂ, ನಂಬಿಕೆಯ ಆಧಾರದಲ್ಲಿ ಮೌದೀನ್ ಸಾಬ್ ಅವರು ಮನೆ ನಿರ್ಮಾಣ ಕೆಲಸ ಶುರು ಮಾಡಿದ್ದಾರೆ. 2026ರಲ್ಲಿ ಪೂರ್ತಿ ಕೆಲಸ ಮುಗಿಸಿದ್ದಾರೆ. ಒಟ್ಟು 68 ಲಕ್ಷ ರೂ ಖರ್ಚು ಮಾಡಿ ಮೌದೀನ್ ಸಾಬ್ ಅವರು ಮನೆ ಕಟ್ಟಿದ್ದು, ಈ ಅವಧಿಯಲ್ಲಿ ಸುನೀಲ ಶೆಟ್ಟಿ ದಂಪತಿ 45.60 ಲಕ್ಷ ರೂ ಪಾವತಿ ಮಾಡಿದ್ದಾರೆ. ಆದರೆ, ಇನ್ನೂ ಪಾವತಿಸಬೇಕಿದ್ದ 22.40 ಲಕ್ಷ ರೂ ಮಾತ್ರ ನೀಡಿಲ್ಲ.
ಹೀಗಿರುವಾಗ, ಮೌದೀನ್ ಸಾಬ್ ಅವರು ಹಣ ಕೇಳಲು ಆ ಸೈಟಿನ ಬಳಿ ಹೋಗಿದ್ದಾರೆ. ಆಗ, `ಈ ಮನೆ ನೀನೇ ಕಟ್ಟಿರುವುದಕ್ಕೆ ದಾಖಲೆ ಏನು? ಎಂದು ಸುನೀಲ ಶೆಟ್ಟಿ ಅವರು ಪ್ರಶ್ನಿಸಿದ್ದಾರೆ. `ಹಣ ಕೊಡಲ್ಲ’ ಎಂದು ಖಾರವಾಗಿ ಮಾತನಾಡಿದ್ದಾರೆ. `ಸ್ವಂತ ಬಂಡವಾಳ ಹಾಕಿ ಕಟ್ಟಡ ನಿರ್ಮಾಣ ಮಾಡಿದ ತನಗೆ ನಂಬಿಕೆ ದ್ರೋಹವಾಗಿದೆ’ ಎಂದು ಮೌದೀನ್ ಅನ್ವರ್ ಸಾಬ್ ಮುಲ್ಲಾ ಅವರು ದೂರಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಪರಿಶೀಲನೆ ಶುರು ಮಾಡಿದ್ದಾರೆ.
`ಹಣಕಾಸು ವ್ಯವಹಾರ ಮಾಡುವಾಗ ಎಚ್ಚರಿಕೆವಹಿಸಿ. ಅಧಿಕೃತ ದಾಖಲೆ-ರಸೀದಿ ಕಾಯ್ದಿರಿಸಿ’