ಬೇಡ್ತಿ – ವರದಾ ನದಿ ಜೋಡಣೆ ಯೋಜನೆಗೆ ಸರ್ಕಾರ ಆಸಕ್ತಿವಹಿಸಿದ್ದು, ಆಕಾಶದಿಂದಲೇ ಫೋಟೋಗ್ರಾಫಿ ಸರ್ವೇ ಶುರು ಮಾಡಿದೆ. ಯೋಜನಾ ವರದಿ ಸಿದ್ಧಪಡಿಸುವುದಕ್ಕಾಗಿ ಜಲ ಸಂಪನ್ಮೂಲ ಇಲಾಖೆ ಈ ಸರ್ವೇ ನಡೆಸುತ್ತಿದೆ.
ಜಲ ಸಂಪನ್ಮೂಲ ಇಲಾಖೆಯ ಮೇಲುಸ್ತುವಾರಿಯಲ್ಲಿ ಕರ್ನಾಟಕ ಇಂಜಿನಿಯರಿoಗ್ ಸಂಶೋಧನ ಕೇಂದ್ರವೂ ಈ ಸರ್ವೇ ಕಾರ್ಯವನ್ನು ಕೈಗೆತ್ತಿಕೊಂಡಿದೆ. 3 ತಿಂಗಳ ಒಳಗೆ ಸರ್ವೇ ಕಾರ್ಯ ಮುಗಿಸಿ ವರದಿಯನ್ನು ಸರ್ಕಾರಕ್ಕೆ ನೀಡಲು ಸಿದ್ಧತೆ ನಡೆದಿದೆ. ಕಳೆದ ವರ್ಷ ಡಿಸೆಂಬರಿನಲ್ಲಿಯೇ ಡಿಪಿಆರ್ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಡಿಸೆಂಬರ್ 23ರಂದು ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಜೊತೆ ಈ ಕುರಿತಾದ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿದೆ.
ಸದ್ಯ ಆಕಾಶದಿಂದ ನಡೆಯುತ್ತಿರುವ ಸರ್ವೇಯಲ್ಲಿ ಭೂಮಿಯ ಎತ್ತರ, ತಗ್ಗುಗಳು ಮತ್ತು ನೈಸರ್ಗಿಕ ಹಾಗೂ ಮಾನವ ನಿರ್ಮಿತ ರಚನೆಗಳನ್ನು ನಿಖರವಾಗಿ ಅಳತೆ ಮಾಡಲಾಗುತ್ತಿದೆ. ಜೊತೆಗೆ ಅವುಗಳ ನಕ್ಷೆ ತಯಾರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದಕ್ಕಾಗಿ ಆಧುನಿಕ ಡ್ರೋನ್ ಸಹಾಯಪಡೆಯಲಾಗಿದೆ. ಈ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಆ ಮಾಹಿತಿ ಖಚಿತಪಡಿಸಿಕೊಂಡು ಅವರು ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಭೂಮಿಯ ಇಳಿಯಾರು, ಬೆಟ್ಟಗುಡ್ಡಗಳು, ಕಣಿವೆಗಳು, ಮರಗಳು ಮತ್ತು ನೀರಿನ ಹರಿವಿನ ದಿಕ್ಕುಗಳನ್ನು ಸಹ ಈ ಸರ್ವೇಯಲ್ಲಿ ಗುರುತಿಸಲಾಗುತ್ತಿದೆ. ಜಾಗದಲ್ಲಿರುವ ಹಳೆಯ ಕಟ್ಟಡ, ರಸ್ತೆ, ಬೇಲಿ, ವಿದ್ಯುತ್ ಕಂಬ ಮತ್ತು ಒಳಚರಂಡಿ ಮಾರ್ಗಗಳ ಮಾನವ ನಿರ್ಮಿತ ರಚನೆಗಳ ಅಳತೆ ನಿಖರ ಸ್ಥಾನಗಳು ಸರ್ವೇಯಲ್ಲಿ ಕಾಣಿಸುತ್ತಿವೆ.
ಟೊಪೋಗ್ರಾಫೀಕಲ್ ಡ್ರೋನ್ ಸರ್ವೆ ಮೂಲಕ ಸಮಯ ಉಳಿತಾಯ ಹೆಚ್ಚಿನ ನಿಖರತೆ ಸರ್ವೆಗೆ ಮಾನವ ಜೀವಿಗಳ ದೈಹಿತ ಹಸ್ತಕ್ಷೇಪ, ಕಡಿಮೆ ವೆಚ್ಚ ಮತ್ತು ಶ್ರಮದಿಂದ ಸರ್ವೇ ಕಾರ್ಯಕ್ಕೆ ಟೊಪೋಗ್ರಾಫೀಕಲ್ ಡ್ರೋನ್ ಸರ್ವೆ ನೇರವಾಗಲಿದೆ ಎಂದು ಭಾವಿಸಿ ಈ ವಿಧಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಟೊಪೋಗ್ರಾಫೀಕಲ್ ಡ್ರೋನ್ ಸರ್ವೇಗೆ ಸಂಭoಧಿಸಿ ಕಾಮಗಾರಿಯ ವಿವರ ನೀರು ಹರಿಯುವ ಮಾರ್ಗ ಸುರಂಗ ಮತ್ತು ಪೈಪ್ ಲೈನ್ ನಕ್ಷೆ , ಬ್ಯಾರೇಜ್, ಮತ್ತು ಯೋಜನೆ ಕಾಮಗಾರಿ ಅನುಷ್ಠಾನಗೊಳ್ಳಲಿರುವ ಪ್ರದೇಶದಲ್ಲಿನ ಸ್ಟಷ್ಟ ಚಿತ್ರಣವನ್ನು ಮೂರು ತಿಂಗಳಲ್ಲಿ ಸರ್ವೆಯಿಂದ ವಿಸ್ತೃತ ಅಂಶ ದಾಖಲಾಗಲಿದೆ.