ಅನಧಿಕೃತ ಬಂದೂಕು ಬಳಕೆ, ದರೋಡೆ, ಬೈಕ್ ಕಳ್ಳತನ ಸೇರಿ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಯಲ್ಲಾಪುರದ ಪ್ರಕಾಶ ಸಿದ್ದಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಪ್ರಕಾಶ ಸಿದ್ದಿ ಅವರನ್ನು ಪೊಲೀಸರು ಉಪಾಯವಾಗಿ ಹಿಡಿದಿದ್ದಾರೆ.
ಯಲ್ಲಾಪುರದ ಬಿಳಕಿ ಜಡಗಿನಕೊಪ್ಪದ ಬಳಿ ಪ್ರಕಾಶ ಕೃಷ್ಣ ಸಿದ್ದಿ ಅವರು ವಾಸವಾಗಿದ್ದಾರೆ. 26 ವರ್ಷದ ಅವರು ಮೊದಲಿನಿಂದಲೂ ಕಳ್ಳತನ ರೂಢಿಸಿಕೊಂಡಿದ್ದು, ಅನೇಕ ಅಕ್ರಮ-ಅವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2022ರಲ್ಲಿ ಪ್ರಕಾಶ ಸಿದ್ದಿ ಅವರ ಬಳಿ ಅನಧಿಕೃತ ಬಂದೂಕು ಪತ್ತೆಯಾಗಿತ್ತು. ಯಾವುದೇ ಅನುಮತಿ-ಪರವಾನಿಗೆ ಇಲ್ಲದಿದ್ದರೂ ಪ್ರಕಾಶ ಸಿದ್ದಿ ಅವರು ಬಂದೂಕು ಬಳಸುತ್ತಿದ್ದರು. ಅದಾದ ನಂತರ ದರೋಡೆ ಪ್ರಕರಣವೊಂದರಲ್ಲಿ ಪ್ರಕಾಶ ಸಿದ್ದಿ ಅವರು ಸಿಕ್ಕಿ ಬಿದ್ದಿದ್ದರು.
2024ರ ಅಗಸ್ಟ್ 30ರಂದು ಮಾದೇವಕೊಪ್ಪದ ಬೆಂಡು ಪಾಂಡ್ರಮೀಸೆ ಅವರ ಬೈಕ್ ಕಳ್ಳತನವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಬೈಕ್’ನ್ನು ಪ್ರಕಾಶ ಸಿದ್ದಿ ಅಪಹರಿಸಿದ್ದು ಗೊತ್ತಾಗಿತ್ತು. 2024ರ ಫೆ 4ರಂದು ಮುಂಡಗೋಡು ಶಿಡ್ಲಗುಂಡಿ ಗ್ರಾಮದಲ್ಲಿ ಮೌಲಾಲಿ ಪಿರಸಾಬ್ ಕುಣಬಿ ಅವರ ಬೈಕ್ ಸಹ ಕಳ್ಳತನವಾಗಿದ್ದು, ಅದರಲ್ಲಿಯೂ ಪ್ರಕಾಶ ಸಿದ್ದಿ ಪ್ರಮುಖ ಪಾತ್ರ ನಿಭಾಯಿಸಿದ್ದರು. 2023ರ ಡಿಸೆಂಬರ್ 26ರಂದು ಮುಂಡಗೋಡಿನ ಕಾತೂರು ಗ್ರಾಮದ ಮಂಜುನಾಥ ಶೆಟ್ಟರ್ ಅವರ ಬೈಕನ್ನು ಸಹ ಪ್ರಕಾಶ ಸಿದ್ದಿ ಅವರು ಅಪಹರಿಸಿದ್ದರು.
ಈ ಎಲ್ಲಾ ಪ್ರಕರಣದಲ್ಲಿಯೂ ಪ್ರಕಾಶ ಸಿದ್ದಿ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನುಪಡೆದು ಅವರು ಬಿಡುಗಡೆಯಾಗಿದ್ದರು. ಜಾಮೀನಿನ ಮೇಲೆ ಹೊರಬಂದ ಪ್ರಕಾಶ ಸಿದ್ದಿ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕೋರ್ಟಿಗೆ ಹೋಗದೇ ತಪ್ಪಿಸಿಕೊಂಡಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗೀತಾ ಪಾಟೀಲ ಅವರ ಸೂಚನೆ ಮೇರೆಗೆ ಯಲ್ಲಾಪುರ ಹಾಗೂ ಮುಂಡಗೋಡು ಪಿಐ ರಮೇಶ ಹಾನಾಪುರ ಅವರು ಪ್ರಕಾಶ ಸಿದ್ದಿ ಅವರ ಬಂಧನಕ್ಕೆ ಬಲೆ ಬೀಸಿದರು.
ಯಲ್ಲಾಪುರ ಪಿಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಅವರ ಜೊತೆ ಪೊಲೀಸ್ ಸಿಬ್ಬಂದಿ ಗೋಪಾಲ ಚೌಹಾಣ, ಸಂತೋಷ ಬಾಳೇರ್, ಬಸವರಾಜ ಡಿಕೆ, ಪರಶುರಾಮ ದೊಡ್ಡಮನಿ, ಮಹಾಂತೇಶ ಕಡಪಟ್ಟಿ, ಹನುಮಂತಪ್ಪ ಕೋಲಾರ, ಮಹೇಶ ಸಾವಂಗಿ, ವಿಶ್ವನಾಥ ಜಯನ್ನಗೌಡರ್, ರೇಖಾ ಎಂ ಎಸ್ ಸೇರಿ ಆರೋಪಿ ಪ್ರಕಾಶ ಸಿದ್ದಿ ಅವರನ್ನು ಬಂಧಿಸಿದರು. ಸದ್ಯ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.