ನವೀಲಗೋಣದ ತಾರಾ ಭಟ್ಟ ಅವರು ನಿದ್ದೆ ಮಾಡುತ್ತಿದ್ದಾಗ ದೊಡ್ಡ ಸದ್ದು ಕೇಳಿಸಿದ್ದು, ಅದು `ಬೆಕ್ಕು ಮಾಡಿದ ಶಬ್ದ’ ಎಂದು ಭಾವಿಸಿ ಅವರು ಮತ್ತೆ ನಿದ್ರೆಗೆ ಜಾರಿದ್ದಾರೆ. ಮರುದಿನ ಬೆಳಗ್ಗೆ ಮಗ ಸಿಸಿ ಕ್ಯಾಮರಾ ನೋಡಿದಾಗ ಮನೆಯೊಳಗೆ ಕಳ್ಳರು ನುಗ್ಗಿರುವುದು ಗೊತ್ತಾಗಿದೆ.
ಹೊನ್ನಾವರದ ನವೀಲಗೋಣದಲ್ಲಿ ತಾರಾ ಅಶೋಕ ಭಟ್ಟ ಅವರು ವಾಸವಾಗಿದ್ದಾರೆ. ಜುಲೈ 28ರ ರಾತ್ರಿ 10 ಗಂಟೆಗೆ ಅವರು ಊಟ ಮಾಡಿ, ಮನೆ ಮಹಡಿ ಏರಿದ್ದಾರೆ. ಅಲ್ಲಿಯೇ ಅವರು ಹಾಸಿಗೆ ಬಿಡಿಸಿ ಮಲಗಿದ್ದಾರೆ. 11 ಗಂಟೆಯ ವೇಳೆಗೆ ಅವರಿಗೆ ದೊಡ್ಡ ಸದ್ದೊಂದು ಕೇಳಿಸಿದೆ. ನಿದ್ದೆಯ ಮಂಪರಿನಲ್ಲಿದ್ದ ಅವರು ಮತ್ತೆ ನೆಲ ಮಹಡಿಗೆ ಬರಲು ಮನಸ್ಸು ಮಾಡಿಲ್ಲ. `ಬೆಕ್ಕು ಸದ್ದು ಮಾಡಿರಬಹುದು’ ಎಂದು ಭಾವಿಸಿ ಅವರು ಮತ್ತೆ ನಿದ್ದೆಗೆ ಜಾರಿದ್ದಾರೆ.
ಮರುದಿನ ಬೆಳಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ಹಂಚು ಒಡೆದಿದ್ದು ಕಾಣಿಸಿದೆ. ಹಿಂದಿನ ಬಾಗಿಲು ತೆಗೆದುಕೊಂಡಿರುವುದನ್ನು ಅವರು ನೋಡಿದ್ದಾರೆ. ಕೂಡಲೇ, ಪಕ್ಕದ ಮನೆಯ ಶೋಭಾ ಪ್ರಭಾಕರ ಭಟ್ಟ ಹಾಗೂ ಸಹೋದರ ಪ್ರಭಾಕರ ದೇವರು ಭಟ್ಟ ಅವರಿಗೆ ಮಾಹಿತಿ ನೀಡಿದ್ದಾರೆ. ಅದಾದ ನಂತರ ಮಗ ವಿಶ್ವನಾಥ ಭಟ್ಟ ಅವರಿಗೆ ಫೋನ್ ಮಾಡಿದ್ದಾರೆ. ಮೊಬೈಲ್ ನೋಡಿದ ವಿಶ್ವನಾಥ ಭಟ್ಟ ಅವರು ಸಿಸಿ ಕ್ಯಾಮರಾ ದಾಖಲೆ ಪರಿಶೀಲನೆ ನಡೆಸಿ, `ರಾತ್ರಿ ಮನೆಗೆ ಕಳ್ಳರು ಬಂದಿದ್ದರು’ ಎಂದಿದ್ದಾರೆ.
ಇದರಿoದ ಗಲಿಬಿಲಿಗೊಂಡ ತಾರಾ ನಾಯ್ಕ ಅವರು ಇಡೀ ಮನೆ ಹುಡುಕಾಡಿದ್ದಾರೆ. ಆದರೆ, ಮನೆಯಲ್ಲಿದ್ದ ಯಾವ ವಸ್ತು ಸಹ ಕಳ್ಳತನ ಆಗಿಲ್ಲ. ಅದಾಗಿಯೂ, ಮನೆ ಹಂಚು ಒಡೆದ ಆ ಕಳ್ಳರ ವಿರುದ್ಧ ಅವರು ಕಾನೂನು ಕ್ರಮಕ್ಕೆ ಆಗ್ರಹಿಸಿ, ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.