ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಮಳೆಯ ಅಬ್ಬರಕ್ಕೆ ಶಿರಸಿ ತತ್ತರಿಸಿದೆ. ಕೆಲವಡೆ ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆ ಇನ್ನೂ ಬಿಡುವು ನೀಡಿಲ್ಲ.
ಶಿರಸಿಯ ಕೋಟೆಕೆರೆ ಭರ್ತಿಯಾಗಿದೆ. ಕೆರೆಯ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ನೀರಿನಿಂದ ಆವೃತವಾದ ರಸ್ತೆಯಿಂದ ಆ ಭಾಗದ ಸಂಚಾರ ಅಸ್ತವ್ಯಸ್ಥವಾಗಿದೆ. ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿ ನೀರಿನಲ್ಲಿ ಮುಳುಗಿದೆ. ಇಲ್ಲಿನ ಅನೇಕ ಮನೆಗಳ ಒಳಗೆ ನೀರು ನುಗ್ಗಿದೆ. ಗಟಾರದ ನೀರು ಅಂಗಳದವರೆಗೆ ಬಂದಿದ್ದರಿoದ ಆ ಭಾಗದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಎಸಳೆಯ ನವಗ್ರಾಮದಲ್ಲಿಯೂ ಭಾರೀ ಪ್ರಮಾಣದ ನೀರು ನುಗ್ಗಿದ್ದು, ಆ ಭಾಗದ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಹುಬ್ಬಳ್ಳಿ ರಸ್ತೆಯ ಶ್ರೀಧರ ನಗರದ ವಿವಿಧ ಕಡೆ ಗಲೀಜು ನೀರು ತುಂಬಿದ್ದರಿoದ ಅಲ್ಲಿನ ಪರಿಸ್ಥಿತಿಯೂ ಶೋಚನೀಯ ಹಂತ ತಲುಪಿದೆ. ಸಮೃದ್ಧಿ ನಗರದ ಜನರು ಮನೆಯ ಬಾಗಿಲವರೆಗೆ ನೀರು ನುಗ್ಗಿದ್ದರಿಂದ ಹೊರಬರಲಾಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ.
ಬಿಕ್ನಳ್ಳಿಯ ಸಾವಿತ್ರಿ ಗೌಡ ಅವರ ಕೊಟ್ಟಿಗೆ ಮನೆ ಗಾಳಿ-ಮಳೆಗೆ ಉದುರಿಬಿದ್ದಿದೆ. ಚಿಪಗಿಯ ದೇವನಿಲಯ ಪ್ರದೇಶದ ಮಳೆಗೆ ಜನ ತತ್ತರಿಸಿದ್ದು, ಅಲ್ಲಿನ ಗಟಾರದಲ್ಲಿ ಸರಾಗವಾಗಿ ನೀರು ಹರಿಯದೇ ತೊಂದರೆಯಾಗಿದೆ. ಗಟಾರದ ನೀರು ಮಳೆ ನೀರಿನ ಜೊತೆ ಸಿಲುಕಿ ಕಸ-ಕಡ್ಡಿಗಳ ಜೊತೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಧಾರಾಕಾರ ಮಳೆಗೆ ಚೌಡೇಶ್ವರಿ ನಗರ ನಡುಗಡ್ಡೆಯ ಹಾಗಾಗಿದೆ. ಕೋಟೆಕೆರೆ ಹಾಗೂ ಆ ಭಾಗದ ರಸ್ತೆಗಳಿಗೆ ಸಮಾನವಾಗಿ ನೀರು ನುಗ್ಗಿದ್ದು, ರಸ್ತೆ-ಕೆರೆ ನಡುವಿನ ವ್ಯತ್ಯಾಸ ತಿಳಿಯುತ್ತಿಲ್ಲ. ಸಮೃದ್ಧಿ ನಗರದಲ್ಲಿದ್ದ ಆರ್ ಎಸ್ ನಾಯ್ಕ ಅವರ ಡಿಜಿಎಸ್ ಸೌಂಡ್ ಬಾಕ್ಸ್ ಹಾಗೂ ಇಲೆಟ್ಟಾನಿಕ್ ಮಳಿಗೆ ನೀರಿನಲ್ಲಿ ಮುಳುಗಿದೆ.
ಲಾಲಗೌಡರ ನಗರದಲ್ಲಿನ ತ್ಯಾಜ್ಯ ಘಟಕದಿಂದ ನೀರು ಹೊರಬಂದು ಮಳೆ ನೀರಿಗೆ ಕೂಡಿಕೊಂಡಿದೆ. ಅದರ ಪರಿಣಾಮ ಸುತ್ತಲಿನ ಪರಿಸರ ಗಬ್ಬು ವಾಸನೆಯಾಗಿದೆ. ಮಳೆ ನೀರಿಗೆ ಹಾವು-ಚೇಳು ಸೇರಿ ವಿವಿಧ ಜಾತಿಯ ಕ್ರಿಮಿ-ಕೀಟಗಳು ಕೊಚ್ಚಿ ಹೋಗಿದ್ದು, ಆಶ್ರಯಕ್ಕಾಗಿ ಜನ ವಸತಿ ಮನೆಗಳತ್ತ ಮುಖ ಮಾಡಿವೆ.