ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದ ಮಹಮದ್ ಅಲ್ತಾಪ್ ಅವರಿಗೆ ನಾಗರಾಜ ಆಚಾರಿ ಹಾಗೂ ತೌಹೀದ್ ಬುಡ್ಡೆ ಸೇರಿ ಗಾಂಜಾ ಕೊಟ್ಟಿದ್ದಾರೆ. ಆ ಗಾಂಜಾವನ್ನು ಮಾರಾಟ ಮಾಡಿ ಹಣ ಮಾಡುವಂತೆ ಸೂಚಿಸಿದ್ದು, ಗಾಂಜಾ ಮಾರಾಟಕ್ಕೆ ಹೋಗಿದ್ದ ಮಹಮದ್ ಅಲ್ತಾಪ್ ಅವರು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.
ಹೊನ್ನಾವರದ ಕಾಸರಕೋಡ್ ಟೊಂಕಾ-2 ಬಳಿ ಮಹಮದ್ ಅಲ್ತಾಪ್ ಸುಲೇಮಾನ್ ಬೇಟ್ಕುಳಿಕರ್ ಅವರು ವಾಸವಾಗಿದ್ದಾರೆ. 30 ವರ್ಷದ ಅವರು ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದು, ಅವರಿಗೆ ಕಾಸರಕೋಡಿನ ತೌಹೀದ್ ಕಾಸೀಂ ಬುಡ್ಡೆ ಅವರು ಎದುರಾಗಿದ್ದಾರೆ. ಈ ವೇಳೆ ಮಹಮದ್ ಅಲ್ತಾಪ್ ಅವರು ತೌಹೀದ್ ಕಾಸೀಂ ಬುಡ್ಡೆ ಅವರಲ್ಲಿ ಉದ್ಯೋಗ ಸಮಸ್ಯೆ ಹೇಳಿಕೊಂಡಿದ್ದಾರೆ. ಆಗ, ತೌಹೀದ್ ಕಾಸೀಂ ಬುಡ್ಡೆ ಅವರು ಹೊನ್ನಾವರದ ನಾಗರಾಜ ಆಚಾರಿ ಅವರ ಬಳಿ ಮಹಮದ್ ಅಲ್ತಾಪ್ ಅವರನ್ನು ಕರೆತಂದಿದ್ದಾರೆ. ನಂತರ ನಾಗರಾಜ ಆಚಾರಿ ಹಾಗೂ ತೌಹೀದ್ ಕಾಸೀಂ ಬುಡ್ಡೆ ಅವರು ಸೇರಿ ಮಹಮದ್ ಅಲ್ತಾಪ್ ಅವರ ಕೈಗೆ ಗಾಂಜಾ ಪುಡಿ ನೀಡಿದ್ದಾರೆ.
`ಈ ಗಾಂಜಾ ಮಾರಾಟ ಮಾಡಿ 6 ಸಾವಿರ ರೂ ಹಣಗಳಿಸು’ ಎಂದು ಅವರಿಬ್ಬರು ಹೇಳಿದ್ದಾರೆ. ಅದನ್ನು ನಂಬಿದ ಮಹಮದ್ ಅಲ್ತಾಪ್ ಅವರು ಅಗಸ್ಟ 18ರ ಸಂಜೆ ಹೊನ್ನಾವರ ಪಟ್ಟಣದ ಮಹಾಲಕ್ಷಿ ಗ್ಯಾಸ್ ಗೌಡಾನ್ ಬಳಿ ಬಂದಿದ್ದಾರೆ. ಅಲ್ಲಿನ ಬಂದರು ರಸ್ತೆ ಬದಿಯಲ್ಲಿ ನಿಂತು ಗಾಂಜಾ ಗಿರಾಕಿಗಳನ್ನು ಹುಡುಕಲು ಶುರು ಮಾಡಿದ್ದಾರೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರಿಗೆ ಈ ವಿಷಯ ಗೊತ್ತಾಗಿದೆ. ಪೊಲೀಸ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್ ಅವರ ಸೂಚನೆ ಮೇರೆಗೆ ಪಿಐ ಸಿದ್ದರಾಮೇಶ್ವರ ಹಾಗೂ ಪಿಸೈ ಮಹಾಂತೇಶ ವಾಲ್ಮೀಕಿ, ಮಂಜುನಾಥ ಅವರು ಅಲ್ಲಿಗೆ ಹೋಗಿದ್ದಾರೆ.
ಪೊಲೀಸ್ ಸಿಬ್ಬಂದಿ ಮನೋಜ, ರವಿ ನಾಯ್ಕ, ಅಬ್ದುಲ್ ಹಮೀಬ್ ಶೇಖ್, ಮಧುಕರ ಕರಿಗಾರ, ಮಂಜುನಾಥ ಕೊಂತಿಕಲ್ ಸೇರಿ ಮಹಮದ್ ಅಲ್ತಾಪ್ ಅವರನ್ನು ಹಿಡಿದು ವಿಚಾರಿಸಿದ್ದಾರೆ. ಆಗ, ಅವರ ಬಳಿ 116 ಗ್ರಾಂ ಗಾಂಜಾ ಸಿಕ್ಕಿದ್ದು, ಅದನ್ನು ಕಾಸರಕೋಡಿನ ತೌಹೀದ್ ಕಾಸೀಂ ಬುಡ್ಡೆ ಹಾಗೂ ಹೊನ್ನಾವರದ ನಾಗರಾಜ ಆಚಾರಿ ಅವರು ನೀಡಿದನ್ನು ಮಹಮದ್ ಅಲ್ತಾಪ್ ಅವರು ಬಾಯ್ಬಿಟ್ಟಿದ್ದಾರೆ. ಗಾಂಜಾ ಮಾರಾಟಕ್ಕೆ ಬಂದಿದ್ದ ಮಹಮದ್ ಅಲ್ತಾಪ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನವಿಧಿಸಿದೆ.
`ಮಾದಕ ವಸ್ತುಗಳ ಮಾರಾಟ ಬದುಕಿಗೆ ಮಾರಕ’