ಎರಡು ಕುಟುಂಬದ ನಡುವೆ ನಡೆಯುತ್ತಿದ್ದ ಜಾಗದ ವಿಷಯದ ಹೋರಾಟ ಇದೀಗ ಹೊಟೆದಾಟದ ಸ್ವರೂಪಪಡೆದಿದೆ. ಭೂಮಿಯ ಹಕ್ಕಿಗಾಗಿ ನಡೆಯುತ್ತಿದ್ದ ಜಗಳ ತಾರಕಕ್ಕೇರಿದ್ದು, ಎರಡು ಕುಟುಂಬದವರ ನಡುವೆ ಮಾರಾಮಾರಿ ನಡೆದಿದೆ.
ಭಟ್ಕಳದ ಸರ್ಪನಕಟ್ಟೆಯ ರಾಮಚಂದ್ರ ನಾಯ್ಕ ಹಾಗೂ ನಾಗಮ್ಮ ನಾಯ್ಕ ಅವರ ಮೇಲೆ ನಾಲ್ವರು ಸೇರಿ ದಾಳಿ ಮಾಡಿದ್ದಾರೆ. ಮಂಜುನಾಥ ನಾಯ್ಕ, ಹನುಮಂತ ನಾಯ್ಕ, ಬೇಬಿ ನಾಯ್ಕ ಹಾಗೂ ಸುಮಿತ್ರಾ ನಾಯ್ಕ ಅವರು ದಾಳಿ ಮಾಡಿದವರಾಗಿದ್ದು, ಅವರ ಮೇಲೆಯೂ ಪ್ರತಿ ದಾಳಿ ನಡೆದಿದೆ. ಮಂಜುನಾಥ ನಾರಾಯಣ ನಾಯ್ಕ, ಹನುಮಂತ ನಾರಾಯಣ ನಾಯ್ಕ, ಬೇಬಿ ಮಂಜುನಾಥ ನಾಯ್ಕ ಹಾಗೂ ಸುಮಿತ್ರಾ ಮಂಜುನಾಥ ನಾಯ್ಕ ಅವರ ಜೊತೆ ಎದುರುದಾರರಾದ ಮಾಮಿತ್ಲುವಿನ ರವಿ ರಾಮಚಂದ್ರ ನಾಯ್ಕ, ರಾಮಚಂದ್ರ ಸಣ್ಣಯ್ಯ ನಾಯ್ಕ, ನಾಗಮ್ಮ ರಾಮಚಂದ್ರ ನಾಯ್ಕ, ಗಿರಿಜಾ ನಾಯ್ಕ ಅವರ ವಿರುದ್ಧ ಪೊಲೀಸ್ ಕೇಸು ದಾಖಲಾಗಿದೆ.
ಜಾಗದ ಸರ್ವೇ ವಿಷಯವಾಗಿ ಸಲ್ಲಿಕೆಯಾದ ಅರ್ಜಿಗೆ ಸರ್ವೇ ಮಾಡಲು ಬಂದಾಗ ಅದಕ್ಕೆ ವಿರೋಧವ್ಯಕ್ತವಾಗಿದ್ದು ಹೊಡೆದಾಟಕ್ಕೆ ಕಾರಣ. ರಾಮಚಂದ್ರ ನಾಯ್ಕ ಅವರು `ನಾವು ಜಾಗ ಖರೀದಿ ಮಾಡಿದ್ದು’ ಎಂದು ವಾದಿಸಿ, `16 ಗುಂಟೆಯAತೆ ಸಮಪಾಲು ಆಗಬೇಕು’ ಎಂದು ಹೇಳಿದ್ದಾರೆ. ಆಗ ಎದುರುದಾರರು ಆಕ್ರಮಣ ಮಾಡಿದ್ದಾರೆ. ಪ್ರತಿಯಾಗಿ ರಾಮಚಂದ್ರ ನಾಯ್ಕ ಕಡೆಯವರು ದಾಳಿ ಮಾಡಿದ್ದಾರೆ. ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.