ವಿಆರ್ಎಲ್ ಲಾಜಿಸ್ಟಿಕ್’ನ ಚೇರ್ಮೆನ್ ಹಾಗೂ MD ವಿರುದ್ಧ ಶಿರಸಿ ಪೊಲೀಸರು ಕೇಸು ಹಾಕಿದ್ದು, ವಿಆರ್ಎಲ್ ಲಾಜಿಸ್ಟಿಕ್ ಹಾಗೂ ಮತ್ತೊಬ್ಬರಿಂದ ತಮಗೆ 3.35 ಲಕ್ಷ ರೂ ವಂಚನೆಯಾಗಿದೆ ಎಂದು ರಿಯಾನ್ ಎಂಟರಪೈಸಸ್’ನ ವ್ಯವಸ್ಥಾಪಕ ಅರ್ಪಿತ್ ಮೊಹಮದ್ ಬಶೀರ್ ಅವರು ದೂರಿದ್ದಾರೆ.
ಶಿರಸಿಯ ಹುಬ್ಬಳ್ಳಿ ರಸ್ತೆಯಲ್ಲಿ ರಿಯಾನ್ ಎಂಟರಪೈಸಸ್ ಕಚೇರಿಯಿದೆ. ಅಲ್ಲಿ ವ್ಯವಸ್ಥಾಪಕರಾಗಿ ಅರ್ಪಿತ್ ಮೊಹಮದ್ ಬಶೀರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸಪೇಟೆ ರಸ್ತೆಯಲ್ಲಿರುವ ವಿ ಆರ್ ಎಲ್ ಲಾಜಿಸ್ಟಿಕ್ ಮೂಲಕ ಸೆಪ್ಟೆಂಬರ್ 26ರಂದು 780 ಕೆಜಿ ಅಡಿಕೆ ರವಾನೆ ಮಾಡಿದ್ದಾರೆ. ಗುಜರಾತಿನ ಗೋತಲವಾಡಿಯ ಕೃಷ್ಣ ಸೇಲ್ಸ್ ಎಂಬಾತರಿಗೆ ಅಡಿಕೆ ಕಳುಹಿಸಿದ್ದು, ಕೃಷ್ಣ ಸೇಲ್ಸ್’ನವರು ಹಣ ಪಾವತಿಸಿ ಆ ಸರಕನ್ನು ಬಿಡಿಸಿಕೊಳ್ಳಬೇಕಿತ್ತು. ಆದರೆ, ಕೃಷ್ಣ ಸೇಲ್ಸ್’ನವರು ಹಣ ಪಾವತಿಸಿ ಆ ಅಡಿಕೆ ಬಿಡಿಸಿಕೊಂಡಿಲ್ಲ. ಹೀಗಾಗಿ ಆ ಅಡಿಕೆಯನ್ನು ವಿಆರ್ಎಲ್ ಲಾಜಿಸ್ಟಿಕ್’ನವರು ರಿಯಾನ್ ಎಂಟರಪೈಸಸ್’ಗೆ ಮರಳಿಸಬೇಕಿದ್ದು, ಅದನ್ನು ವಿಆರ್ಎಲ್ ಲಾಜಿಸ್ಟಿಕ್’ನವರು ಮರಳಿಸಲು ಒಪ್ಪುತ್ತಿಲ್ಲ.
`ಹಣ ನೀಡಿ ಬಿಡಿಸಿಕೊಳ್ಳದ ಕಾರಣ ಸರಕು ಶಿರಸಿಗೆ ಮರಳಿ ಬಂದಿದೆ. ರವಾನಿಸಿದ ರಸೀದಿ ಜೊತೆ ವಿಆರ್ಎಲ್ ಲಾಜಿಸ್ಟಿಕ್ ಸಿಬ್ಬಂದಿಗೆ ವಿಚಾರಿಸಿದರೂ ಅದನ್ನು ಮರಳಿಸಲು ಒಪ್ಪುತ್ತಿಲ್ಲ. ಚಿರಾಗ ಭೂಪತಬಾಯಿ ಜಿಕಂದರ್ ಎಂಬಾತರು ಅಕ್ಟೊಬರ್ 10ರಂದು ಸೂರತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ನೀಡಿದವರನ್ನು ಭೇಟಿಯಾಗಿ ಅದನ್ನು ಬಗೆಹರಿಸಿಕೊಂಡರೆ ಮಾತ್ರ ಅಡಿಕೆ ಕೊಡುವುದಾಗಿ ವಿಆರ್ಎಲ್ ಲಾಜಿಸ್ಟಿಕ್ ವ್ಯವಸ್ಥಾಪಕರು ಹೇಳುತ್ತಿದ್ದಾರೆ. ಆದರೆ, ಅಡಿಕೆ ಕೊಡದಂತೆ ಯಾವುದೇ ಕೇಸು ಅಥವಾ ಕೋರ್ಟ ಆದೇಶ ವಿಆರ್ಎಲ್ ಲಾಜಿಸ್ಟಿಕ್ ಬಳಿ ಇಲ್ಲ’ ಎಂದು ರಿಯಾನ್ ಎಂಟರಪೈಸಸ್’ನ ವ್ಯವಸ್ಥಾಪಕ ಅರ್ಪಿತ್ ಮೊಹಮದ್ ಬಶೀರ್ ಅವರು ಹೇಳಿದ್ದಾರೆ.
`ಚಿರಾಗ ಭೂಪತಬಾಯಿ ಜಿಕಂದರ್ ಅವರ ಜೊತೆ ವಿಆರ್ಎಲ್ ಲಾಜಿಸ್ಟಿಕ್’ನ ಚೇರ್ಮೆನ್ ಹಾಗೂ ಎಂ ಡಿ ಸೇರಿ ತಮಗೆ ಅನ್ಯಾಯ ಮಾಡಿದ್ದಾರೆ’ ಎಂದವರು ದೂರಿದ್ದು, ಆ ಮೂವರ ವಿರುದ್ಧವೂ ಶಿರಸಿ ಪೊಲೀಸರು ಕೇಸು ಹಾಕಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ.