ಮೋಜು ಮಸ್ತಿಗಾಗಿ ಗೋಕರ್ಣಕ್ಕೆ ಬಂದು ನಶೆಯ ಗುಂಗಿನಲ್ಲಿ ಮೈ ಮರೆತಿದ್ದ ಪ್ರತಿಷ್ಠಿತ ಕುಟುಂಬದ ಮಹಿಳೆಯರಿಬ್ಬರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮೋಟು ಬೀಡಿಯೊಳಗೆ ಗಾಂಜಾ ಪುಡಿ ಹಾಕಿ ಹೊಗೆ ಬಿಡುತ್ತಿದ್ದ ಮಹಿಳೆಯರು ಪಿಐ ಶ್ರೀಧರ ಎಸ್ ಆರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಅಂಕೀತಾ ಭಟ್ಟಾಚಾರ್ಯ ಅವರು ಉತ್ತರ ಪ್ರದೇಶದ ಖ್ಯಾತ ಕಲಾವಿದೆ. ಚಿತ್ರ ಬಿಡಿಸುವಿಕೆ, ಮಾಡೇಲ್ ಕ್ಷೇತ್ರ ಅವರ ಆಸಕ್ತಿ. ಮೂರು ದಿನದ ಹಿಂದೆ ಗೋಕರ್ಣಕ್ಕೆ ಬಂದಿದ್ದ ಅಂಕೀತಾ ಭಟ್ಟಾಚಾರ್ಯ ಅವರು ಬಂಗ್ಲೆಗುಡ್ಡದ ಬಳಿ ಹೋಗಿದ್ದರು. ಅಲ್ಲಿ ಅವರು ಮೋಜು-ಮಸ್ತಿಯಲ್ಲಿ ತೊಡಗಿದ್ದು, ಅಮಲಿನಲ್ಲಿ ಕುಣಿದಾಡುತ್ತಿದ್ದರು.
ಅಂಕೀತಾ ಭಟ್ಟಾಚಾರ್ಯ ಅವರ ನಡೆಯ ಬಗ್ಗೆ ಅನುಮಾನವ್ಯಕ್ತಪಡಿಸಿದ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಮರುದಿನ ಪೊಲೀಸರು ರುದ್ರಪಾದದ ಬಳಿಯ ಶಿವಮೂನ್ ಗೆಸ್ಟಹೌಸ್ ಬಳಿ ಹೋಗಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಬೆಂಗಳೂರಿನ ಶ್ರೀದೇವಿ ಎನ್ ಡಿ ಅವರು ನಶೆಯಲ್ಲಿದ್ದರು. ಅದನ್ನು ಗುರುತಿಸಿದ ಪೊಲೀಸರು ಅವರನ್ನು ಸಹ ವೈದ್ಯಕೀಯ ತಪಾಸಣೆಗೆ ಕಳುಹಿಸಿದರು.
ಅವರಿಬ್ಬರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆಯನ್ನು ದೃಢಪಡಿಸಿದರು. ನಿಷೇಧಿತ ಗಾಂಜಾ ಬಳಕೆ ಮಾಡಿದ ಕಾರಣ ಆ ಇಬ್ಬರು ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.