ಯುವತಿಯೊಬ್ಬರು ಮನೆಯಲ್ಲಿ ಒಂಟಿಯಾಗಿರುವುದನ್ನು ಅರಿತ ಆರು ಜನ ರಾತ್ರಿ 2 ಗಂಟೆಗೆ ಆ ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆದ ಯುವತಿಯ ಕೈ ಹಿಡಿದು ಎಳೆದಾಡಿದ ಕಿಡಿಕೇಡಿಗಳು ಅವರ ಕೆನ್ನೆಗೆ ಬಾರಿಸಿ ಪರಾರಿಯಾಗಿದ್ದಾರೆ.
ಶಿರಸಿ ಗಣೇಶ ನಗರದದಲ್ಲಿ ರಾಬಿಯಾ ಶೇಖ್ ಅವರು ವಾಸವಾಗಿದ್ದಾರೆ. 19 ವರ್ಷದ ಅವರು ಖಾಸಗಿ ಕಂಪನಿಯೊoದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಡಿಸೆಂಬರ್ 3ರಂದು ಅವರ ತಂದೆ ಹಾಗೂ ತಾಯಿ ಕಾರವಾರಕ್ಕೆ ಹೋಗಿದ್ದು, ಮರುದಿನವೂ ಮನೆಗೆ ಮರಳಿರಲಿಲ್ಲ.
ಹೀಗಿರುವಾಗ, ಡಿಸೆಂಬರ್ 4ರ ರಾತ್ರಿ 2 ಗಂಟೆಗೆ ಅವರ ಮನೆ ಬಾಗಿಲು ಬಡಿದ ಸದ್ದಾಗಿದೆ. ರಾಬಿಯಾ ಶೇಖ್ ಅವರು `ಯಾರು?’ ಎಂದು ಪ್ರಶ್ನಿಸಿದ್ದಾರೆ. ಯಾವುದೇ ಉತ್ತರ ಬಾರದ ಕಾರಣ `ಕಾರವಾರಕ್ಕೆ ಹೋಗಿದ್ದ ತಂದೆ-ತಾಯಿ ಮರಳಿರಬಹುದು’ ಎಂದು ಅಂದಾಜಿಸಿ ಬಾಗಿಲು ತೆರೆದಿದ್ದಾರೆ. ಆದರೆ, ಆ ರಾತ್ರಿ ನೆಹರು ನಗರದ ಅಲ್ತಾಪ ಸಯ್ಯದ್, ಸಲ್ಮಾನ್ ತಹಶೀಲ್ದಾರ್, ಅನಿಸುತ್ಕರ್ ಕೋಟಿ, ಕುತೇಬಾಜಿ ತಹಶಿಲ್ದಾರ್, ಶೈನಾಬ್ ತಹಶೀಲ್ದಾರ್, ಅಶ್ಬಾಕ್ ತಹಶೀಲ್ದಾರ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಅವರೆಲ್ಲರೂ ಸೇರಿ ಮನೆ ಬಳಿ ಗಲಾಟೆ ಮಾಡಿದ್ದರಿಂದ ರಾಬಿಯಾ ಶೇಖ್ ಅವರು ಭಯಪಟ್ಟಿದ್ದಾರೆ.
ಆ ವೇಳೆ ಎದುರುದಾರರು `ಕಂಪ್ಲೆಟ್ ಕೊಡಬೇಡ ಎಂದರೂ ಕಂಪ್ಲೆಟ್ ಕೊಡುತ್ತಿಯಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಲ್ಮಾನ್, ಅಲ್ತಾಪ್, ಅನೀಸ್ ಅವರು ಕೈ ಹಿಡಿದು ಎಳೆದಾಡಿದ್ದಾರೆ. ಅದಾದ ನಂತರ ಕುತೇಜಾಬಿ ಅವರು ರಾಬಿಯಾ ಶೇಖ್ ಅವರ ಕೆನ್ನೆಗೆ ಬಾರಿಸಿದ್ದಾರೆ. `ಶಿರಸಿಯಲ್ಲಿ ನೀ ಹೇಗೆ ತಿರುಗಾಡುತ್ತೀಯ? ಎಂದು ನೋಡುವೆ’ ಎಂದು ಬೆದರಿಕೆ ಹಾಕಿ ಅವರೆಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ರಾಬಿಯಾ ಶೇಖ್ ಅವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.
`ಅಪರಿಚಿತರು ಬಾಗಿಲು ಬಡಿದರೆ ತೆರೆಯದಿರಿ. ತುರ್ತು ಸಹಾಯಕ್ಕೆ 112ಗೆ ಫೋನ್ ಮಾಡಿ’