ಅಶೋಕ ಭಟ್ಟರ ತೋಟದಲ್ಲಿದ್ದ ಬಾವಿಗೆ ಬಿದ್ದು ಜಟ್ಟಿ ಮುಕ್ರಿ ಅವರು ಸಾವನಪ್ಪಿದ್ದಾರೆ. ರಾತ್ರಿ ವೇಳೆ ಸಂಚರಿಸುತ್ತಿದ್ದ ಜಟ್ಟಿ ಮುಕ್ರಿ ಅವರು ಕಾಲು ಜಾರಿ ಬಾವಿಗೆ ಬಿದ್ದಿರುವ ಅನುಮಾನಗಳಿವೆ.
Advertisement. Scroll to continue reading.
ಕುಮಟಾದ ಕತಗಾಲ ಬಳಿಯಿರುವ ಉಪ್ಪಿನಪೊಟ್ಟಣದಲ್ಲಿ ಜಟ್ಟಿ ನಾಗು ಮುಕ್ರಿ (56) ಅವರು ವಾಸವಾಗಿದ್ದರು. ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಅವರು ಸಂಸಾರ ನಡೆಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಜಟ್ಟಿ ಮುಕ್ರಿ ಅವರಿಗೆ ಅನಾರೋಗ್ಯ ಕಾಡಿತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರು ಅನೇಕ ಬಗೆಯ ಔಷಧಿಗಳನ್ನು ಮಾಡಿದ್ದರು.
ಆದರೆ, ಯಾವ ಔಷಧಿಯೂ ಅವರ ದೇಹಕ್ಕೆ ಪರಿಣಾಮ ಬೀರಲಿಲ್ಲ. ಹೀಗಾಗಿ ಹೊಟ್ಟೆ ನೋವು ಸಹಿಸಲಾಗದೇ ಅವರು ಸಮಸ್ಯೆಗೆ ಸಿಲುಕಿದ್ದರು. ರಾತ್ರಿ ಸರಿಯಾಗಿ ನಿದ್ದೆಯನ್ನು ಮಾಡದ ಜಟ್ಟಿ ಮುಕ್ರಿ ಅವರು ತಮಗಿದ್ದ ಬೇಸರದಲ್ಲಿಯೇ ಮನೆಯಿಂದ ಹೊರ ಹೋಗುತ್ತಿದ್ದರು.
ಅದರಂತೆ, ಡಿಸೆಂಬರ್ 5ರ ರಾತ್ರಿ 11 ಗಂಟೆ ಸುಮಾರಿಗೆ ಜಟ್ಟಿ ಮುಕ್ರಿ ಅವರು ಮನೆಯಿಂದ ಹೊರ ಹೋಗಿದ್ದರು. ಎರಡು ದಿನ ಕಳೆದರೂ ಅವರು ಮನೆಗೆ ಮರಳಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದಾಗ ಕತಗಾಲ ಬಳಿಯ ಉಪ್ಪಿನಮೂಟೆಯಲ್ಲಿಯೇ ವಾಸವಾಗಿರುವ ಅಶೋಕ ಭಟ್ಟ ಅವರ ತೋಟದ ಬಾವಿಯಲ್ಲಿ ಜಟ್ಟಿ ಮುಕ್ರಿ ಅವರ ಶವ ಕಾಣಿಸಿತು.
ರಾತ್ರಿ ವೇಳೆ ಓಡಾಡುತ್ತಿದ್ದ ಜಟ್ಟಿ ಮುಕ್ರಿ ಅವರು ಅಶೋಕ ಭಟ್ಟ ಅವರ ತೋಟ ಪ್ರವೇಶಿಸಿದ್ದರು. ನೆಲಕ್ಕೆ ಸಮನಾಂತರವಾಗಿದ್ದ ಬಾವಿಯ ಬಳಿ ಅವರ ಕಾಲು ಜಾರಿದ್ದು, ಬಾವಿಯೊಳಗೆ ಬಿದ್ದ ಅವರು ಮೇಲೆ ಬರಲಾಗದೇ ಕೊನೆಯುಸಿರೆಳೆದರು. ಈ ವಿಷಯದ ಬಗ್ಗೆ ಜಟ್ಟಿ ಮುಕ್ರಿ ಅವರ ಪತ್ನಿ ದುರ್ಗಿ ಮುಕ್ರಿ ಅವರು ಮಾಹಿತಿ ನೀಡಿದರು. ಕುಮಟಾ ಪೊಲೀಸ್ ಠಾಣೆಯ ಪಿಎಸೈ ಮಂಜುನಾಥ ಗೌಡರ್ ಅವರು ಪ್ರಕರಣ ದಾಖಲಿಸಿದರು.
`ಬಾವಿ ಸುತ್ತ ಕಪೌಂಡ್ ನಿರ್ಮಿಸಿ. ನೆಲ ಬಾವಿಯ ಅಪಾಯ ತಪ್ಪಿಸಿ’