ಕಾರವಾರದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸಿನ ಬ್ರೆಕ್ ಹಾಗೂ ಕ್ಲಚ್ ಪೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಮಕ್ಕಳ ಜೀವ ಉಳಿದಿದೆ. ನಾಲ್ಕು ದಿನದ ಹಿಂದೆ ನಡೆದ ವಿದ್ಯಮಾನದ ವಿಡಿಯೋ ಇದೀಗ ವೈರಲ್ ಆಗಿದೆ.
ಕಾರವಾರ ಡಿಪೋದಿಂದ ದೇವಳಮಕ್ಕಿ ಹಾಗೂ ನಗೆಕೋವೆ ಪ್ರದೇಶಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಳಾಗಿದೆ. ಘಟ್ಟದ ಪ್ರದೇಶದಲ್ಲಿ ಬಸ್ಸು ಹಾಳಾಗಿದ್ದರಿಂದ ಪ್ರಯಾಣಿಕರು ಕಂಗಾಲಾಗಿದ್ದು, ಕೂಡಲೇ ಬಸ್ಸಿನ ಚಾಲಕ ವಾಹನವನ್ನು ಹಿಂದಕ್ಕೆ ಚಲಿಸಿ ಗುಡ್ಡಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅದರಿಂದಾಗಿ ಬಸ್ಸಿನ ಒಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರ್ಕಾರಿ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸಿದ್ದಾರೆ. ಡಿಪೋ ಮ್ಯಾನೇಜರ್ ಸೌಮ್ಯಾ ನಾಯಕ್ ಅವರು `ಅಪಘಾತ ನಡೆದು ದಿನ ಕಳೆದಿದೆ. ಯಾರಿಗೂ ಗಾಯವಾಗಿಲ್ಲ. ಬಸ್ ಸರಿಯಾಗಿಯೇ ಇದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.