ಸಿದ್ದಾಪುರದ ತನ್ವೀರ್ ಸಾಬ್ ಅವರು ಗ್ಯಾಸ್ ರಿಪೇರಿ ಮಾಡಿ ಚಿನ್ನ ಹಾಗೂ ಹಣ ಸಂಪಾದಿಸಿದ್ದು, ಅದನ್ನು ಅವರ ಪತ್ನಿ ರೇಷ್ಮಾ ಸಾಬ್ ಅವರು ಅಪಹರಿಸಿದ್ದಾರೆ. ತಮ್ಮ ಸಹೋದರರ ಸಹಾಯದಿಂದ ರೇಷ್ಮಾ ಸಾಬ್ ಅವರು ಗಂಡನ ಉಂಗುರವನ್ನು ಮಾರಾಟ ಮಾಡಿದ್ದಾರೆ.
ಸಿದ್ದಾಪುರದ ಹಾಳಾದಕಟ್ಟಾದಲ್ಲಿ ತನ್ವೀರ ಹುಸೇನ್ ಸಾಬ್ ಅವರು ವಾಸವಾಗಿದ್ದಾರೆ. ಗ್ಯಾಸ್ ಒಲೆ ರಿಪೇರಿ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಧಾರವಾಡದ ಮಾಲಾಪುರ ಬಸ್ ನಿಲ್ದಾಣ ಬಳಿಯ ಹಾತರಕಿ ನಗರದ ರೇಷ್ಮಾ ಸಾಬ್ ಅವರನ್ನು ತನ್ವೀರ್ ಸಾಬ್ ಅವರು ವಿವಾಹವಾಗಿದ್ದಾರೆ. ರೇಷ್ಮಾ ಸಾಬ್ ಹಾಗೂ ತನ್ವೀರ್ ಸಾಬ್ ಅವರ ನಡುವೆ ಸಣ್ಣ ಸಣ್ಣ ವಿಷಯಕ್ಕೆ ಜಗಳವಾಗುತ್ತಿದ್ದು, ಅದನ್ನೇ ದೊಡ್ಡದಾಗಿಸಿದ ರೇಷ್ಮಾ ಸಾಬ್ ಅವರು ತವರು ಮನೆ ಸೇರಿದ್ದಾರೆ.
ಈ ನಡುವೆ ರೇಷ್ಮಾ ಸಾಬ್ ಅವರು ಧಾರವಾಡದ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ವೀರ್ ಸಾಬ್ ಅವರ ವಿರುದ್ಧ ದೂರು ನೀಡಿದ್ದಾರೆ. ತವರು ಮನೆಗೆ ಹೋಗುವಾಗ ಸಿದ್ದಾಪುರದ ಮನೆಯಲ್ಲಿದ್ದ ಕಪಾಟಿನ ಬೀಗದ ಕೀಯನ್ನು ರೇಷ್ಮಾ ಸಾಬ್ ಅವರು ಒಯ್ದಿದ್ದು, ತನ್ವೀರ್ ಸಾಬ್ ಅವರು ಮನೆಯಲ್ಲಿ ಇಲ್ಲದ ವೇಳೆ ಬಂದು ಅಲ್ಲಿದ್ದ ಚಿನ್ನ-ಹಣ ಅಪಹರಿಸಿ ಪರಾರಿ ಆಗಿದ್ದಾರೆ. `ಗ್ಯಾಸ್ ರಿಪೇರಿ ಮಾಡಿ ತಾವು ಕೂಡಿಟ್ಟಿದ್ದ 1 ಲಕ್ಷ ರೂ ಹಣ, ಬಳೆ, ಚೈನು, ಲೊಕೇಟ್, ಉಂಗುರವನ್ನು ರೇಷ್ಮಾ ಸಾಬ್ ಅವರು ತಮ್ಮ ಸಹೋದರರಾದ ನಿಯಾಜ್ ಮಹಮದ್ ಅಲಿ ಮುಲ್ಲಾ ಹಾಗೂ ಸಾನು ಮಹಮದ್ ಅಲಿ ಸಹಾಯದಿಂದ ದೋಚಿದ್ದಾರೆ’ ಎಂದು ತನ್ವೀರ್ ಸಾಬ್ ಅವರು ಅಳಲು ತೋಡಿಕೊಂಡಿದ್ದಾರೆ.
`ಈ ಪೈಕಿ 1 ಲಕ್ಷ ರೂ ಹಣವನ್ನು ರೇಷ್ಮಾ ಸಾಬ್ ಅವರು ಸಿದ್ದಾಪುರದ ಎಸ್ ಬಿ ಐ ಖಾತೆಗೆ ಜಮಾ ಮಾಡಿದ್ದಾರೆ. ತನ್ನ ಉಂಗುರವನ್ನು ಮಾರಾಟ ಮಾಡಿದ್ದಾರೆ. 2021ರಲ್ಲಿ ಈ ಎಲ್ಲಾ ಘಟನೆ ನಡೆದಿದ್ದರೂ ಅನಾರೋಗ್ಯದ ಕಾರಣ ಇದೀಗ ದೂರು ನೀಡುತ್ತಿದ್ದು, ಕ್ರಮ ಜರುಗಿಸಬೇಕು’ ಎಂದು ತನ್ವೀರ್ ಶೇಖ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ಶುರು ಮಾಡಿದ್ದಾರೆ.