ಹೊನ್ನಾವರದ ಗಣಪತಿ ನಾಯ್ಕ ಅವರು ತಮ್ಮ ಕಣ್ತಪ್ಪಿನಿಂದ ಸಂತೋಷಕುಮಾರ ಆಚಾರಿ ಅವರಿಗೆ 5 ಸಾವಿರ ರೂ ಪೋನ್ ಪೇ ಮಾಡಿದ್ದಾರೆ. ಆ ಹಣ ಮರಳಿ ಕೇಳಿದ ಕಾರಣ ಗಣಪತಿ ನಾಯ್ಕ ಅವರು ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದಾರೆ.
ಹೊನ್ನಾವರದ ಗೇರುಸೊಪ್ಪ ಬಳಿಯ ವರ್ನಕೋಡದ ಗಣಪತಿ ನಾರಾಯಣ ನಾಯ್ಕ ಅವರು ವಿದ್ಯುತ್ ನಿಗಮದಲ್ಲಿ ಚಾಲಕರಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಜನವರಿ 7ರಂದು ಅವರು ಗೇರುಸೊಪ್ಪದಲ್ಲಿ ಅಂಗಡಿಹೊಂದಿದ ಸಂತೋಷ ಅವರ ಖಾತೆಗೆ 5 ಸಾವಿರ ರೂ ಹಾಕಬೇಕಿದ್ದು, ಅಲ್ಲಿ ಹಣ ಹಾಕುವ ಬದಲು ಕೆಪಿಸಿ ಕಾಲೋನಿಯ ಸಂತೋಷಕುಮಾರ ರಾಮಚಂದ್ರ ಆಚಾರಿ ಅವರ ಖಾತೆಗೆ ಪೋನ್ ಪೇ ಮಾಡಿದ್ದಾರೆ. ನಂತರ ಮತ್ತೆ 3030ರೂ ಹಣ ಕಳುಹಿಸಿದ್ದಾರೆ.
ಅದಾದ ನಂತರ ಅಂಗಡಿ ಸಂತೋಷ ಅವರಿಗೆ ಹಾಕಬೇಕಾದ ಹಣ ಕೆಪಿಸಿಯಲ್ಲಿ ಕೆಲಸ ಮಾಡುವ ಸಂತೋಷ ಆಚಾರಿ ಅವರಿಗೆ ಪಾವತಿ ಆಗಿರುವುದು ಗಣಪತಿ ನಾಯ್ಕ ಅವರಿಗೆ ಗೊತ್ತಾಗಿದೆ. ಈ ಬಗ್ಗೆ ಗಣಪತಿ ನಾಯ್ಕ ಅವರು ಸಂತೋಷ ಆಚಾರಿ ಅವರಲ್ಲಿ ವಿಚಾರಿಸಿದ್ದಾರೆ. ಮೊದಲು ‘ಹಣ ಬಂದೇ ಇಲ್ಲ’ ಎಂದಿದ್ದ ಸಂತೋಷ ಆಚಾರಿ, ಸ್ಕ್ರೀನ್ ಶಾಟ್ ಕಾಣಿಸಿದ ನಂತರ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ.
‘ಕಣ್ತಪ್ಪಿನಿಂದ ಹಣ ಕಳುಹಿಸಿದ್ದೇನೆ. ಅದನ್ನು ಮರಳಿಸು’ ಎಂದು ಗಣಪತಿ ನಾಯ್ಕ ಅವರು ಮನವಿ ಮಾಡಿದ್ದಾರೆ. ‘ನಾಳೆ ಕೊಡುವೆ’ ಎನ್ನುತ್ತಲೇ ಸಂತೋಷ ಆಚಾರಿ ಅವರು ತಿಂಗಳು ಕಳೆದಿದ್ದಾರೆ. ‘ಆ ಸಂತೋಷ ಹಣ ಕೊಡುತ್ತಿಲ್ಲ’ ಎಂದು ಗಣಪತಿ ನಾಯ್ಕ ಅವರು ಎಲ್ಲಾ ಕಡೆ ಹೇಳಿದ್ದು ಸಂತೋಷ ಆಚಾರಿ ಅವರ ಸಿಟ್ಟಿಗೆ ಕಾರಣವಾಗಿದೆ. ಹೀಗಿರುವಾಗ ಫೆಬ್ರವರಿ 4ರಂದು ಗೇರುಸೊಪ್ಪದ ಕನ್ನಿಕಾ ಹೊಟೇಲ್ ಎದುರು ಗಣಪತಿ ನಾಯ್ಕ ಅವರು ನಿಂತಿದ್ದಾಗ ಅಲ್ಲಿಗೆ ಬಂದ ಸಂತೋಷ ಆಚಾರಿ ಅವರು ‘ಹಣ ಕೊಡುವುದಿಲ್ಲ’ ಎಂದು ಕೂಗಾಡಿದ್ದಾರೆ. ಜೊತೆಗೆ ಗಣಪತಿ ನಾಯ್ಕ ಅವರ ಮೇಲೆ ಕೈ ಮಾಡಿದ್ದಾರೆ.
ಈ ವೇಳೆ ಹೊಟೇಲಿನಲ್ಲಿದ್ದ ಯೋಗೇಶ ನಾಯ್ಕ, ರಾಮಾ ನಾಯ್ಕ ಹಾಗೂ ಇನ್ನಿತರ ಜನ ಸೇರಿ ಆ ಹೊಡೆದಾಟ ತಪ್ಪಿಸಿದ್ದಾರೆ. ಅದಾಗಿಯೂ, ಸಂತೋಷ ಆಚಾರಿ ಅವರು ಗಣಪತಿ ನಾಯ್ಕ ಅವರ ಕಡೆ ಕಲ್ಲು ಬೀಸಿದ್ದಾರೆ. ಕಲ್ಲು ತಾಗಿದ್ದರಿಂದ ಗಣಪತಿ ನಾಯ್ಕ ಅವರು ಗಾಯಗೊಂಡಿದ್ದು, ಅವರನ್ನು ಕೆಪಿಸಿ ಆಂಬುಲೆನ್ಸಿನ ಮೂಲಕ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಗಣಪತಿ ನಾಯ್ಕ ಅವರು ಚಿಕಿತ್ಸೆಪಡೆದರು.
ಹೊನ್ನಾವರ ಎಸೈ ಗಿರೀಶ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಗಣಪತಿ ನಾಯ್ಕ ಅವರ ಆರೋಗ್ಯ ವಿಚಾರಿಸಿದರು. ಗಣಪತಿ ನಾಯ್ಕ ಅವರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.