ದಾಖಲೆಗಳ ಪ್ರಕಾರ ಹೋದರೆ 15 ಸಾವಿರ ಖರ್ಚಾಗುತ್ತದೆ. 2 ಸಾವಿರ ರೂ ಕೊಟ್ಟರೆ ಈಗಲೇ ಕೆಲಸ ಮಾಡುತ್ತೇವೆ ಎಂದು ಸಿದ್ದಾಪುರದ ಶಿರಳಗಿ ಪಿಡಿಓ ರಾಜೇಶ ನಾಯ್ಕ ಅವರು ಹೇಳಿದ್ದು, ಇದನ್ನು ಬರೆದುಕೊಡಿ ಎಂದು ಹೇಳಿದ ಕಾರಣ ಪ್ರಭು ದೊಡ್ಡಮನಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ಸರಿಯಾಗಿ ಸ್ಪಂದಿಸದೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ಪ್ರಭು ದೊಡ್ಡಮನಿ ಅವರ ಪತ್ನಿ ಕಾವ್ಯಶ್ರೀ ಅವರು ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಕಾವ್ಯಶ್ರೀ ಅವರು `ನನ್ನ ಗಂಡನ ಬಳಿ ಲಂಚ ಬೇಡಿದ ಪಿಡಿಓ ರಾಜೇಶ ನಾಯ್ಕ ಅವರು ಹಣ ಕೊಡದ ಕಾರಣ ಹಲ್ಲೆ ಮಾಡಿದ್ದಾರೆ. ಅದಾದ ನಂತರ ನಮ್ಮ ವಿರುದ್ಧವೇ ಅನಗತ್ಯ ಆರೋಪ ಮಾಡುತ್ತಿದ್ದು, ಪೊಲೀಸರು ಸಹ ನಮಗೆ ಸ್ಪಂದಿಸಿಲ್ಲ’ ಎಂದು ದೂರಿದ್ದಾರೆ. `ನಾವು ನೀಡಿದ ದೂರಿಗೆ ಪೊಲೀಸರು ಕೇವಲ ಸ್ವೀಕೃತಿ ನೀಡಿ ಕಳುಹಿಸಿದ್ದು, ಆದರೆ, ರಾಜೇಶ್ ನಾಯ್ಕ ಅವರು ನೀಡಿದ ದೂರಿಗೆ ತಕ್ಷಣವೇ ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಉದ್ಯಮ ಆರಂಭಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿ 8 ದಿನ ಕಳೆದರೂ ಪ್ರಮಾಣಪತ್ರ ಸಿಗದ ಕಾರಣ ಅದರ ಬಗ್ಗೆ ವಿಚಾರಿಸಲು ಪ್ರಭು ದೊಡ್ಡಮನಿ ಗ್ರಾಮ ಪಂಚಾಯತ್‌ಗೆ ಹೋಗಿದ್ದರು. ಈ ವೇಳೆ ಪಿಡಿಒ ಅವರು ಇನ್ನೂ ಹಲವು ದಾಖಲೆಗಳು ಹಾಗೂ ಬಾಂಡ್ ಪೇಪರ್ ಬೇಕು ಎಂದಿದ್ದಾರೆ. ಅದನ್ನು ಪೇಪರ್‌ನಲ್ಲಿ ಬರೆದುಕೊಡಿ ಎಂದು ಕೇಳಿದಾಗ ಐದು ನಿಮಿಷ ಕಾಯಿರಿ ಎಂದು ಹೇಳಿದ್ದಾರೆ. ನಂತರ ಪುನಃ ವಿಚಾರಿಸಿದಾಗ, ಕೆಲಸ ತಕ್ಷಣ ಆಗಬೇಕೆಂದರೆ ಎರಡು ಸಾವಿರ ಕೊಡಬೇಕು’ ಎಂದು ಹಣ ಬೇಡಿದ್ದಾರೆ. ಒಂದು ವೇಳೆ ದಾಖಲೆಗಳ ಪ್ರಕಾರ ಹೋದರೆ 10-15 ಸಾವಿರ ರೂ ಬೇಕಾಗುತ್ತದೆ, ಇದನ್ನು ಮೇಲಧಿಕಾರಿಗಳಿಗೂ ನೀಡಬೇಕು’ ಎಂದಿರುವ ಬಗ್ಗೆ ಕಾವ್ಯಶ್ರೀ ಅವರು ಮಾಹಿತಿ ನೀಡಿದ್ದಾರೆ.
`ನಾವು ಕೂಲಿ ಕೆಲಸ ಮಾಡುವವರು. ಅಷ್ಟು ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದಾಗ, ಪಿಡಿಒ ಅವರು ಅವಾಚ್ಯ ಶಬ್ದಗಳಿಂದ ಬೈಯ್ದು ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ್ದಾರೆ. ಅಲ್ಲಿಯೇ ಇದ್ದ ಸಿಬ್ಬಂದಿ ಸಹ ಗಲಾಟೆ ಬಿಡಿಸುವ ಬದಲು ಪಿಡಿಓಗೆ ಪ್ರಚೋದನೆ ನೀಡಿದ್ದಾರೆ’ ಎಂದು ಕಾವ್ಯಶ್ರೀ ಅವರು ವಿವರಿಸಿದ್ದಾರೆ. `ಘಟನೆಯ ನಂತರ ಗಂಡ ಕರೆ ಮಾಡಿ ವಿಷಯ ತಿಳಿಸಿದ ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಬಂದ ಪೊಲೀಸರು ಹೇಳಿಕೆ ಪಡೆದು ಠಾಣೆಗೆ ಬಂದು ದೂರು ನೀಡಲು ತಿಳಿಸಿದರು. ಆದರೆ, ಸಂಜೆ 5 ಗಂಟೆಗೆ ಠಾಣೆಗೆ ಹೋದರೆ ಕೇವಲ ಸ್ವೀಕೃತಿ ನೀಡಿ, ನಾಳೆ ಬನ್ನಿ ಎಫ್‌ಐಆರ್ ಮಾಡೋಣ ಎಂದು ಕಳುಹಿಸಿದರು. ಮರುದಿನ ಹೋದಾಗ ನಮ್ಮ ಮೇಲೆ ದಾಖಲಾದ ಕೇಸಿನ ಎಫ್‌ಐಆರ್ ಪ್ರತಿ ನೀಡಿದ್ದಾರೆ. ನಾವು ಮೊದಲು ದೂರು ನೀಡಿದ್ದರೂ ಅದನ್ನು ಪರಿಗಣಿಸದೇ ಪಿಡಿಒ ನೀಡಿದ ದೂರಿಗೆ ಆದ್ಯತೆ ನೀಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು. ಸದ್ಯ ಪಿಡಿಓ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.