ಮೀನುಗಾರಿಕೆಗೆ ಅಗತ್ಯವಿರುವ ಬಲೆ ಖರೀದಿಗಾಗಿ ಮಲ್ಪೆಗೆ ಹೊರಟಿದ್ದ ಕುಮಟಾದ ಸುಬ್ರಮಣ್ಯ ಅಂಬಿಗ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅವರ ಜೊತೆಗಿದ್ದ ಭಗೀರಥ ಅಂಬಿಗ ಅವರಿಗೂ ಗಾಯಗಳಾಗಿವೆ.
ಕುಮಟಾದ ಹೆಗಡೆ ಬಳಿ ಸುಬ್ರಮಣ್ಯ ಬೀರಪ್ಪ ಅಂಬಿಗ (35) ಹಾಗೂ ಭಗೀರಥ ಮಹಾದೇವ ಅಂಬಿಗ (25) ಅವರು ವಾಸವಾಗಿದ್ದರು. ಮೀನುಗಾರಿಕೆ ನಂಬಿ ಬದುಕು ಕಟ್ಟಿಕೊಂಡಿದ್ದ ಅವರು ಭಾನುವಾರ ಮಲ್ಪೆಗೆ ಹೋಗಲು ನಿರ್ಧರಿಸಿದ್ದರು. ಮಲ್ಪೆಗೆ ಹೋಗಿ ಮೀನುಗಾರಿಕಾ ಬಲೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಅವರು ಯೋಚಿಸಿದ್ದು, ಅದರ ಪ್ರಕಾರ ಬೈಕಿನಲ್ಲಿಯೇ ಅವರು ಬಹುದೂರದ ಪ್ರಯಾಣ ಶುರು ಮಾಡಿದ್ದರು.
ಈ ಬೈಕನ್ನು ಸುಬ್ರಮಣ್ಯ ಅಂಬಿಗ ಅವರು ಓಡಿಸುತ್ತಿದ್ದರು. ಭಗೀರಥ ಅಂಬಿಗ ಅವರು ಹಿಂದೆ ಕುಳಿತಿದ್ದರು. ಬೈಕು ಗಿಬ್ ಸರ್ಕಲ್ ಬಳಿ ಬಂದಾಗ ಲಾರಿಯೊಂದು ಗುದ್ದಿತು. ಗುದ್ದಿದ ರಭಸಕ್ಕೆ ಬೈಕು ಲಾರಿ ಅಡಿಗೆ ಬಿದ್ದಿದ್ದು, ಬೈಕ್ ಓಡಿಸುತ್ತಿದ್ದ ಸುಬ್ರಮಣ್ಯ ಅಂಬಿಗ ಅವರು ಅಲ್ಲಿಯೇ ಪ್ರಾಣಬಿಟ್ಟರು. ಗಾಯಗೊಂಡಿದ್ದ ಭಗೀರಥ ಅಂಬಿಗ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.