ಅನ್ನ-ನೀರು ಇಲ್ಲದೇ ಅಲೆದಾಡುತ್ತಿದ್ದ ಬೀದಿ ನಾಯಿಗೆ ಕಾರವಾರದ ಬೈರೆಯ ತುಶಾರ್ ಲೊಳೆಕರ್ ಅವರು ಊಟ ಹಾಕಿದ್ದು, ಅದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಆ ನಾಯಿಯನ್ನು ಅವರೇ ಸಾಕಬೇಕು. ನಾಯಿಯ ಸಂಪೂರ್ಣ ಆರೈಕೆ ಮಾಡಬೇಕು’ ಎಂದು ಅಲ್ಲಿನ ಗ್ರಾಮ ಪಂಚಾಯತವೂ ತುಶಾರ್ ಲೊಳೆಕರ್ ಅವರಿಗೆ ನೋಟಿಸ್ ನೀಡಿದ್ದು, ಅದನ್ನು ಪಾಲಿಸದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಕೆಲ ದಿನಗಳ ಹಿಂದೆ ಬೈರೆ ಬಸ್ ನಿಲ್ದಾಣದ ಬಳಿ ನಾಯಿಯೊಂದು ಅಸ್ವಸ್ಥಗೊಂಡಿತ್ತು. ಮೂರು ದಿನಗಳಿಂದ ಆಹಾರ ಸೇವಿಸದ ನಾಯಿ ಬಗ್ಗೆ ಅರಿತ ತುಶಾರ್ ಲೊಳೆಕರ್ ಅವರು ಆ ನಾಯಿಗೆ ಊಟ ಹಾಕಿದರು. ಊಟ ಹಾಕಿದ ಕಾರಣ ಕೃತಜ್ಞತೆ ಸಲ್ಲಿಸಿದ ಆ ನಾಯಿ ತುಶಾರ್ ಲೊಳೆಕರ್ ಅವರನ್ನು ಹಿಂಬಾಲಿಸಿಕೊoಡು ಬಂದಿತು. ಅದಾದ ನಂತರ ತಮ್ಮ ಮನೆಯಲ್ಲಿ ಉಳಿದ ಊಟವನ್ನು ಆ ನಾಯಿಗೆ ಹಾಕುವುದನ್ನು ರೂಢಿಸಿಕೊಂಡರು. ಆ ನಾಯಿ ತುಶಾರ್ ಲೊಳೆಕರ್ ಅವರ ಮನೆ ಸುತ್ತ ಅಲೆದಾಡುತ್ತಿದ್ದು, ತುಶಾರ್ ಲೊಳೆಕರ್ ಅವರೇ ಆ ನಾಯಿ ಸಾಕುತ್ತಿದ್ದಾರೆ ಎಂದು ಊರಿನವರು ಭಾವಿಸಿದ್ದರು.
ಸದ್ಯ ಆ ನಾಯಿಗೆ ಹುಚ್ಚು ಹಿಡಿದಿದ್ದು, ಕೆಲವರ ಮೇಲೆ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದ ಜನ ತುಶಾರ್ ಲೊಳೆಕರ್ ಅವರನ್ನು ಪ್ರಶ್ನಿಸುತ್ತಿದ್ದಾರೆ. `ಆ ನಾಯಿಗೆ ವಿಷ ಹಾಕಿ ಸಾಯಿಸು’ ಎಂದು ಜನ ಒತ್ತಡ ಹಾಕಿದ್ದಾರೆ. `ನಾಯಿಯನ್ನು ಕೊಲ್ಲುವಷ್ಟು ಕಟುಕ ನಾನಲ್ಲ’ ಎಂದು ತುಶಾರ್ ಲೊಳೆಕರ್ ಅವರು ಹೇಳಿದ್ದಾರೆ. ಆದರೆ, ಅಲ್ಲಿನವರು ಈ ವಿಷಯ ಒಪ್ಪುತ್ತಿಲ್ಲ. ಗ್ರಾಮ ಪಂಚಾಯತ ಕಚೇರಿಯವರೆಗೆ ಈ ವಿಷಯ ಮುಟ್ಟಿದ್ದು, ಇದೀಗ ಅಲ್ಲಿನ ಅಧಿಕಾರಿಗಳು ನಾಯಿ ವಿಷಯವಾಗಿ ತುಶಾರ್ ಲೊಳೆಕರ್ ಅವರಿಗೆ ನೋಟಿಸ್ ನೀಡಿದ್ದಾರೆ. ನಾಯಿಗೆ ಅನ್ನ ಹಾಕಿದ ಕಾರಣ ತುಶಾರ್ ಲೊಳೆಕರ್ ಅವರನ್ನು ಜವಾಬ್ದಾರರನ್ನಾಗಿ ಮಾಡಿದ ಗ್ರಾಮ ಪಂಚಾಯತದವರು ಆ ಶ್ವಾನದ ಸಂಪೂರ್ಣ ಆರೈಕೆ ಹಾಗೂ ನಿಯಂತ್ರಣ ಮಾಡುವಂತೆ ತುಶಾರ್ ಲೊಳೆಕರ್ ಅವರಿಗೆ ಸೂಚನೆ ನೀಡಿದ್ದಾರೆ.
ಗ್ರಾಮ ಪಂಚಾಯತ ನೋಟಿಸ್ ನೀಡಿದ ಕ್ರಮವನ್ನು ತುಶಾರ್ ಲೊಳೆಕರ್ ಅವರು ಖಂಡಿಸಿದ್ದಾರೆ. `ಮಾನವೀಯ ನೆಲೆಯಲ್ಲಿ ನಾಯಿಗೆ ಅನ್ನ ಹಾಕಿದನ್ನು ತಪ್ಪು ಎಂದು ಪರಿಗಣಿಸಲಾಗಿದೆ. ಗ್ರಾಮ ಪಂಚಾಯತ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಬೀದಿ ನಾಯಿಗಳ ನಿರ್ವಹಣೆ ಮಾಡುವ ಪ್ರಾಧಿಕಾರದವರು ಈ ಜವಾಬ್ದಾರಿವಹಿಸಿಕೊಳ್ಳಬೇಕು’ ಎಂದು ತುಶಾರ್ ಲೊಳೆಕರ್ ಅವರು ಹೇಳಿದ್ದಾರೆ.