ಶಿರಸಿಯ TSS ರಸ್ತೆಯ ಸುವರ್ಣ ಬ್ಯಾಂಕ್ ಎದುರು ಶುಕ್ರವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಈ ಜಗಳ ಹೊಡೆದಾಟದ ಸ್ವರೂಪಪಡೆದಿದೆ.
ಗುತ್ತಿಗೆದಾರ ರಮೇಶ್ ನಾಗೇಶ್ ದುಬಾಶಿ (60) ಹಾಗೂ ವಿರಾಜ್ ಪ್ರಭಾಕರ್ ಶೆಟ್ಟಿ (26) ನಡಿವಿನ ಹಳೆಯ ದ್ವೇಷ ಈ ಸಂಘರ್ಷಕ್ಕೆ ಕಾರಣ. ‘ರಾತ್ರಿ ಫೋನ್ ಮಾಡಿ ಕರೆಸಿ, ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದರು’ ಎಂದು ರಮೇಶ್ ದುಬಾಶಿ ಅವರು ದೂರಿದ್ದಾರೆ. ‘ಮೇ 29ರ ರಾತ್ರಿ 11:30ರ ಸುಮಾರಿಗೆ ಯಶವಂತ ಎಂ ಬೈಂದೂರ್ ಎಂಬಾತರು ತಮಗೆ ಫೋನ್ ಮಾಡಿ ಅವಾಚ್ಯವಾಗಿ ಬೈದರು. ಅದಾದ ನಂತರ ಅವರು ಜಗಳಕ್ಕೆ ಆಹ್ವಾನಿಸಿದ್ದು, ಜಗಳಕ್ಕೆ ಬಂದವನ ಮೇಲೆ ಹಲ್ಲೆ ನಡೆದಿದೆ’ ಎಂಬುದು ರಮೇಶ ದುಬಾಶಿ ಅವರ ಅಳಲು. ‘ಸ್ನೇಹಿತರಾದ ಮಂಜುನಾಥ ಶೇರುಗಾರ ಹಾಗೂ ಸದಾನಂದ ಮದ್ದೋಡಿ ಅವರೊಂದಿಗೆ ಸುವರ್ಣ ಬ್ಯಾಂಕ್ ಹತ್ತಿರ ಹೋದಾಗ ಅಲ್ಲಿ ಯಶವಂತ ಬೈಂದೂರ್, ಕಾಶೀನಾಥ ಬೈಂದೂರ್, ಮಂಜುನಾಥ ಬೈಂದೂರ್ ಹಾಗೂ ನಾಗೇಂದ್ರ ಬಿ ಬೈಂದೂರ್ ಮತ್ತಿತರರು ಗುಂಪು ಕಟ್ಟಿಕೊಂಡು ನಿಂತಿದ್ದರು. ಅವರರೆಲ್ಲರೂ ಸೇರಿ ಜೀವ ಬೆದರಿಕೆ ಒಡ್ಡಿದ್ದು, ಕಾಶೀನಾಥ ಮತ್ತು ಯಶವಂತ ಸೇರಿ ಮಂಜುನಾಥ ಶೇರುಗಾರ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಅದಾದ ನಂತರ ಅವರನ್ನು ಕೆಳಗೆ ದೂಡಿದ್ದು, ನಾಗೇಂದ್ರ ಮತ್ತು ಮಂಜುನಾಥ ಸೇರಿ ಸದಾನಂದನ ಮೇಲೂ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ‘ಜಗಳ ಬಿಡಿಸಲು ಹೋದಾಗ ನಮ್ಮ ಮೇಲೆಯೇ ಹಲ್ಲೆ ನಡೆಸಿದರು’ ಎಂದು ವಿರಾಜ್ ಪ್ರಭಾಕರ್ ಶೆಟ್ಟಿ ಅವರು ರಮೇಶ್ ದುಬಾಶಿ ತಂಡದ ವಿರುದ್ಧ ಕಿಡಿಕಾರಿದ್ದಾರೆ. ‘ಮೇ 29ರ ರಾತ್ರಿ 11:30ರ ಸುಮಾರಿಗೆ ವಿರಾಜ್ ಶೆಟ್ಟಿ ಹಾಗೂ ಅವರ ಸ್ನೇಹಿತ ಅನೂಪ್ ಅವರು ಸುವರ್ಣ ಬ್ಯಾಂಕ್ ಹತ್ತಿರ ಇದ್ದಾಗ ಕಾಶೀನಾಥ ಬೈಂದೂರು ಮತ್ತು ಯಶ್ವಂತ ಬೈಂದೂರು ಅವರು ಅಲ್ಲಿಗೆ ಬಂದಿದ್ದ ಎದುರಾಳಿಗಳೊಂದಿಗೆ ಮಾತನಾಡಲು ಹೋಗಿದ್ದರು. ಈ ವೇಳೆ ಎರಡು ಪಕ್ಷಗಳ ನಡುವೆ ಗಲಾಟೆ ಆರಂಭವಾಗಿತ್ತು. ಇದನ್ನು ಗಮನಿಸಿದ ವಿರಾಜ್ ಶೆಟ್ಟಿ ಹಾಗೂ ಅನೂಪ್ ಜಗಳ ಬಿಡಿಸಲು ಮಧ್ಯಪ್ರವೇಶಿಸಿದಾಗ, ಎದುರು ಪಕ್ಷದ ರಮೇಶ ದುಬಾಶಿ, ಭರತ ದುಭಾಶಿ ಹಾಗೂ ಪಯಾಜ ಚೌಟಿ ಮತ್ತಿತರರು ವಿರಾಜ್‌ನ್ನು ಅಡ್ಡಗಟ್ಟಿ ನಿಲ್ಲಿಸಿ ಅವರನ್ನು ಬಿಡಿಸಲು ಬರಲು ನೀನ್ಯಾರು? ಎಂದು ಏಕವಚನದಲ್ಲಿ ಬೈದಿದ್ದಾರೆ. ಅಲ್ಲದೆ ಕೈಗಳಿಂದ ಆತನ ಮುಖ, ಬೆನ್ನು ಹಾಗೂ ತುಟಿಗೆ ತೀವ್ರವಾಗಿ ಹೊಡೆದು ಗಾಯಗೊಳಿಸಿದ್ದಾರೆ’ ಎಂದು ವಿರಾಜ್ ಶೆಟ್ಟಿ ಅವರು ದೂರಿದ್ದಾರೆ.